SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಹೆದ್ದಾರಿ ಬಂದ್ ಎಫೆಕ್ಟ್: ಶಾಲಾ ಮಕ್ಕಳ ಪರದಾಟ

ಹೆದ್ದಾರಿ ಬಂದ್ ಎಫೆಕ್ಟ್: ಶಾಲಾ ಮಕ್ಕಳ ಪರದಾಟ

0
117

ಬಾಗಲಕೋಟೆ (ಕುಳಗೇರಿ ಕ್ರಾಸ್): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ದಿಢೀರ್ ರಾಜ್ಯ ಹೆದ್ದಾರಿ ಬಂದ್‌ಗೆ ಕರೆ ನೀಡಿದ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆ ಅನುಭವಿಸಿದರು.

ಶನಿವಾರ ಶಾಲೆಗಳು ಬೇಗ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಳಿಗ್ಗೆಯೇ ಶಾಲೆಗಳಿಗೆ ಹಾಜರಾಗಿದ್ದರು. ಆದರೆ, ಶಾಲೆ ಮುಗಿಸಿ ಮನೆಗೆ ಮರಳುವುದು ಹೇಗೆ ಎಂಬ ಆತಂಕ ಅವರಲ್ಲಿ ಮನೆಮಾಡಿತ್ತು. ರಾಜ್ಯ ಹೆದ್ದಾರಿಗಳಷ್ಟೇ ಅಲ್ಲದೆ ಗ್ರಾಮೀಣ ಭಾಗದ ರಸ್ತೆಗಳನ್ನೂ ಬಂದ್ ಮಾಡಿದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಪಾಲಕರು, ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಶನಿವಾರವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ ಮಕ್ಕಳಿಗೆ ಈ ರೀತಿಯ ತೊಂದರೆ ಉಂಟಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಶಾಲಾ ವಾಹನಗಳ ಮೂಲಕ ನಿಗದಿತ ಸಮಯಕ್ಕೆ ಮನೆ ತಲುಪಿದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಲ್ಲದೆ ಸಂಕಷ್ಟ ಅನುಭವಿಸಿದರು. ಕೆಲ ಪಾಲಕರು ತಮ್ಮ ಸ್ವಂತ ವಾಹನಗಳಲ್ಲಿ ಬಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು. ಇನ್ನು ವಾಹನ ಸೌಲಭ್ಯವಿಲ್ಲದ ವಿದ್ಯಾರ್ಥಿಗಳು ನಾಲ್ಕೈದು ಕಿಲೋಮೀಟರ್ ನಡೆದುಕೊಂಡೇ ಮನೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ವಿದ್ಯಾರ್ಥಿಗಳ ಪರದಾಟ ಗಮನಿಸಿದ ಕೆಲ ಶಿಕ್ಷಕರು, ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡರು. ರೈತರ ರಸ್ತೆ ಬಂದ್ ಹೋರಾಟದಿಂದಾಗಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ದಿನವಿಡೀ ತೊಂದರೆ ಅನುಭವಿಸುವಂತಾಯಿತು.