SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಕನ್ನಡ ಭಕ್ತರ ಮಧ್ಯೆ ತಾಯಿ ಭುವನೇಶ್ವರಿಯ ಅದ್ಧೂರಿ ರಥೋತ್ಸವ

ಕನ್ನಡ ಭಕ್ತರ ಮಧ್ಯೆ ತಾಯಿ ಭುವನೇಶ್ವರಿಯ ಅದ್ಧೂರಿ ರಥೋತ್ಸವ

0
26

ಬಾಗಲಕೋಟೆ (ಕುಳಗೇರಿ ಕ್ರಾಸ್): ಕನ್ನಡವು ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಇತಿಹಾಸ, ಸ್ವಾಭಿಮಾನ ಹಾಗೂ ಅಸ್ಮಿತೆಯ ಪ್ರತೀಕವಾಗಿದೆ. ಎರಡು ಸಾವಿರಕ್ಕೂ ಅಧಿಕ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಕಿತ್ತಲಿ ಸಿದ್ಧರಾಮೇಶ್ವರ ಮಠದ ಅಭಿನವ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಭೈರನಹಟ್ಟಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಭುವನೇಶ್ವರಿ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿಯ ಜೀವಾಳ. ಕನ್ನಡ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಪ್ರತಿಯೊಬ್ಬರ ಮನೆಯ ಭಾಷೆ ಹಾಗೂ ಮನದ ಭಾಷೆ ಕನ್ನಡವಾಗಬೇಕು. ಕನ್ನಡ ತಾಯಿಗೆಂದೇ ಪ್ರತ್ಯೇಕವಾಗಿ ಮೀಸಲಾಗಿರುವ ಭೈರನಹಟ್ಟಿ ಕನ್ನಡ ಭುವನೇಶ್ವರಿ ರಥೋತ್ಸವ ರಾಜ್ಯದಲ್ಲಿಯೇ ಪ್ರಥಮ ಎಂಬುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಭೈರನಹಟ್ಟಿ ಶ್ರೀಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಬ್ಬಿನ ಸಿಹಿ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಆ ಸಿಹಿಯನ್ನು ಉತ್ಪಾದಿಸುವ ರೈತನ ಬದುಕು ಕಹಿಯಾಗಬಾರದು. ರೈತನ ಬೆವರಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಆತನ ಶ್ರಮಕ್ಕೆ ಗೌರವ ಸಿಗುವುದರ ಜತೆಗೆ ಕುಟುಂಬಕ್ಕೆ ನೆಮ್ಮದಿಯ ಬದುಕು ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಶ್ರಮಕ್ಕೆ ತಕ್ಕ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಇಟಗಿ ಮಲ್ಲಸರ್ಜ ದೇಸಾಯಿ ಮಾತನಾಡಿ, ಕನ್ನಡವನ್ನು ಬಳಸಿ, ಬೆಳೆಸಿ, ಉಳಿಸುವ ಮೂಲಕ ಭಾಷೆಯ ವೈಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಭೈರನಹಟ್ಟಿ ಶ್ರೀಮಠವು ಆಧ್ಯಾತ್ಮಿಕ ಸೇವೆಯ ಜತೆಗೆ ಕನ್ನಡ ಸಾಹಿತ್ಯ, ವಚನ ಪರಂಪರೆ, ಶರಣರ ವಿಚಾರಧಾರೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ಕನ್ನಡ ಧ್ವಜಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಆಗ್ರಹ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನ್ನಡ ಧ್ವಜಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡುವ ವಿಚಾರವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಈ ಕುರಿತು ರಾಜ್ಯದ 224 ಶಾಸಕರು ಹಾಗೂ 28 ಲೋಕಸಭಾ ಸದಸ್ಯರು ಒಗ್ಗಟ್ಟಿನಿಂದ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಶಾಂತಲಿಂಗ ಸ್ವಾಮೀಜಿ ಆಗ್ರಹಿಸಿದರು.