SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಅಜ್ಜಿ ಕೊಂದ ಆರೋಪಿ ಕಾಲಿಗೆ ಪೊಲೀಸರ ಗುಂಡು

ಅಜ್ಜಿ ಕೊಂದ ಆರೋಪಿ ಕಾಲಿಗೆ ಪೊಲೀಸರ ಗುಂಡು

0
78

ಶಿವಮೊಗ್ಗ: ನಗರದ ಮಿಳಘಟ್ಟದಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಪ್ರಕರಣದ ಆರೋಪಿ ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ದೊಡ್ಡಪೇಟೆ ಸಿಪಿಐ ಸತ್ಯನಾರಾಯಣ್ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕೊಲೆ ಆರೋಪಿ ಕಿಶೋರ್ (26) ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಗಣೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಂಜಾ ವ್ಯಸನಿಯ ಕುರಿತು ದೂರು ನೀಡಲು ತೆರಳುತ್ತಿದ್ದ ಅಜ್ಜಿ ಸುಶೀಲಮ್ಮ (65) ಅವರ ತಲೆ ಮೇಲೆ ಬುಧವಾರ ಸೈಜುಗಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಗೈಯಲಾಗಿತ್ತು. ಆರೋಪಿ ಕಿಶೋರ್ ಶರಣಾಗದಿದ್ದಾಗ ಮೊದಲು ಎಚ್ಚರಿಕೆಯ ಸಂದೇಶ ನೀಡಿ ಬಳಿಕ, ಆತ್ಮರಕ್ಷಣೆಗಾಗಿ ಆರೋಪಿಯ ಎಡ ಕಾಲಿಗೆ ಗುಂಡು ಹಾರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹತ್ಯೆಗೆ ನಿಜವಾದ ಕಾರಣ ಏನು..? ಎಂಬುದರ ಕುರಿತು ತನಿಖೆ ನಡೆದಿದೆ. ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಅವರು ಮೊದಲು ಏರ್ ಫೈರ್ ಮಾಡಿ, ಬಳಿಕ ಆರೋಪಿ ಕಿಶೋರ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಮಾಹಿತಿ ನೀಡಿದರು.