SK Home Ad
Home ನಮ್ಮ ಜಿಲ್ಲೆ ಧಾರವಾಡ ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

0
24

ಹುಬ್ಬಳ್ಳಿ: ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಬಿದ್ದು ದಿನಗೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಗುರುವಾರ ಮಧ್ಯಾಹ್ನ ದೇಶಪಾಂಡೆ ನಗರದಲ್ಲಿರುವ ಗುಜರಾತ್ ಭವನದ ಸಮೀಪ ಇರುವ ಕೃಷ್ಣನಗರದಲ್ಲಿ ನಡೆದಿದೆ.

ಮೃತ ಕಾರ್ಮಿಕನನ್ನು ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಮಲ್ಲಪ್ಪ ಯಲ್ಲಪ್ಪ ಜೋಗಿನ (35) ಎಂದು ಗುರುತಿಸಲಾಗಿದೆ. ಪಾಲಿಕೆಯ ವತಿಯಿಂದ ಕೈಗೆತ್ತಿಕೊಂಡಿರುವ ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿಯನ್ನು ಗುತ್ತಿಗೆದಾರ ಮಂಜುನಾಥ್ ಶಂಕರಪ್ಪ ಬಮ್ಮಿಗಟ್ಟಿ ನಿರ್ವಹಿಸುತ್ತಿದ್ದರು. ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆದ ಬಳಿಕ ದಿನಗೂಲಿ ಕಾರ್ಮಿಕರು ಪೈಪ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ಮಲ್ಲಪ್ಪ ಜೋಗಿನ ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆಎಂಸಿಆರ್‌ಐಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.