ದಾವಣಗೆರೆ: ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಕಳ್ಳತನವಾಗಿದ್ದ ಗೂಳಿ (ಹೋರಿ)ಯನ್ನು ಬಸವಾಪಟ್ಟಣ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜೂ. 30ರ ರಾತ್ರಿ ದುಷ್ಕರ್ಮಿಗಳು ಬೊಲೆರೋ ಪಿಕ್‌ಅಪ್ ವಾಹನದಲ್ಲಿ ಬಂದು ದೇವಸ್ಥಾನಕ್ಕೆ ಸೇರಿದ ಗೂಳಿ(ಹೋರಿ)ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ ಸಂತೆಬೆನ್ನೂರು ವೃತ್ತದ ಸಿಪಿಐ ಎಂ.ಆರ್. ಚೌಬೆ ನೇತೃತ್ವದಲ್ಲಿ, ಪಿಎಸ್‌ಐ ಇಮ್ತಿಯಾಜ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ತಂಡವು ತ್ವರಿತ ಕಾರ್ಯಾಚರಣೆ ನಡೆಸಿ, ಕಳ್ಳತನವಾದ ಶ್ರೀಬಸವೇಶ್ವರ ದೇವಸ್ಥಾನದ ಹೋರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚುವುದರ ಜೊತೆಗೆ, ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು 6 ಲಕ್ಷ ಮೌಲ್ಯದ ಬೊಲೆರೋ ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡಿದೆ. ಪ್ರಕರಣದ ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿ ದೇವಸ್ಥಾನದ ಹೋರಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯವನ್ನು ಎಸ್ಪಿ ಡಾ.ಎಚ್.ಟಿ. ಶೇಖರ್ ಪ್ರಶಂಸಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ರವೀಂದ್ರ, ಅಣ್ಣೇಶ್, ಇಬ್ರಾಹಿಂ ಹಾಗೂ ಚಾಲಕ ಇರ್ಷಾದ್ ಸೇರಿದಂತೆ ತಂಡದ ಸದಸ್ಯರನ್ನು ಅಭಿನಂದಿಸಿದ್ದಾರೆ.





















