ಶಿಕಾರಿಪುರ: ಪಟ್ಟಣದ ಪಿ.ಜಿ. ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯ ನಾಪತ್ತೆ ಪ್ರಕರಣ ಒಂದು ವರ್ಷದ ನಂತರ ಹೊಸ ತಿರುವು ಪಡೆದುಕೊಂಡಿದೆ.
ಜೂನ್ 18, 2025ರಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಇದೇ ಜುಲೈ 3ರಂದು ಅಪ್ರಾಪ್ತ ಬಾಲಕಿಯ ತಂದೆ ಶಿಕಾರಿಪುರದ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.
ಇಟ್ಟಿಗೆಹಳ್ಳಿಯ ಗಂಗಾನಾಯ್ಕ, ಶಿಕಾರಿಪುರ ಪಟ್ಟಣದ ಸೌಭಾಗ್ಯ, ನ್ಯಾಮತಿಯ ಸೋಗಿಲು ಗ್ರಾಮದ ಪೂರಾನಾಯ್ಕ, ರಂಜಿತಾ ಬಂಧಿತರು. ಒಂದು ವರ್ಷದ ಹಿಂದೆ ಪಿಜಿಯಲ್ಲಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಿರುಕುಳ ತಾಳಲಾರದೇ ಸಾವಿಗೆ ಶರಣಾಗಿದ್ದಳು. ಆದರೆ, ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಸಾಗಾಟ ಮಾಡಿ, ಜೋಗದ ಸಮೀಪ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಒಂದು ವರ್ಷದಿಂದ ನಾಲ್ವರು ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ, ರಂಜಿತಾ ಮತ್ತು ಪೂರಾನಾಯ್ಕ ನಡುವಿನ ಜಗಳದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮೃತದೇಹದ ಅವಶೇಷಗಳು ಪತ್ತೆಯಾಗಿವೆ ಎಂದಿದ್ದಾರೆ.
ಮೊಬೈಲ್ ಕೊಟ್ಟ ಸುಳಿವು: ಒಂದು ವರ್ಷದಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೊನೆಯದಾಗಿ ಆ ಬಾಲಕಿ ಯಾರಿಗೆ ಕರೆ ಮಾಡಿದ್ದಳು ಎಂಬ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿದಾಗ, ರಂಜಿತಾ ಎಂಬುದು ತಿಳಿದು ಬಂದಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳಿವುಗಳು ಸಿಕ್ಕಿದ್ದು, ಪೊಲೀಸರು ತನಿಖೆ ನಡೆಸಿ ನಾಪತ್ತೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ನಿಖಿಲ್ ಬಿ. ವಿವರಿಸಿದರು.






















