ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ: ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕ ಹಕ್ಕು ಇದೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಪತ್ರಕರ್ತರನ್ನು ಪ್ರಶ್ನಿಸಿದ ಘಟನೆ ನಡೆಯಿತು. ಧ್ವಜಾರೋಹಣ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆಯಲ್ಲಾ ಎಂದು ಪ್ರಶ್ನಿಸಿದರು. ಅದಕ್ಕೆ ಸಚಿವ ಲಕ್ಷ್ಮಣ ಸವದಿ ಮರು ಪ್ರಶ್ನೆ ನ ಹಾಕಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂಬ ಇತಿಹಾಸವನ್ನು ಬಿಜೆಪಿ ಮರೆಯಬಾರದು. ಒಬ್ಬ ಮಗನ ಭ್ರಷ್ಟಾಚಾರದ ಕಾರಣ ಒಬ್ಬ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಾಯಿತು. ನನ್ನ ಬಾಯಿಂದ ಆತನ ಹೆಸರು ಹೇಳಿಸುವ ಪ್ರಯತ್ನ ಮಾಡಬೇಡಿ ಎಂದು ಸಚಿವ ಖಡಕ್ಕಾಗಿ ಹೇಳಿದರು.
ಈ ಹಿಂದೆ ಬಿಜೆಪಿಯ ಯಾವ ಮುಖ್ಯಮಂತ್ರಿಗಳು ಮತ್ತು ಸಚಿವರು ಏತಕ್ಕಾಗಿ ರಾಜೀನಾಮೆ ನೀಡಬೇಕಾಯಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಮಾಜಿ ಸಚಿವ ನಾಗೇಂದ್ರ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು, ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಢೋಂಗಿತನದ ಮಾತುಗಳಿಂದ ಅವರು ತಮ್ಮ ರಾಜಕೀಯ ಗ್ರಾಫ್ ನ್ನು ಮತ್ತಷ್ಟು ಕೆಳಗೆ ಅವರೇ ನೂಕಿಕೊಳ್ಳುತ್ತಿದ್ದಾರೆ.
ರಾಜಕೀಯ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರು. ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಈ ಹಿಂದೆ ಜಿಲ್ಲೆಗೆ 5 ಸಚಿವ ಸ್ಥಾನಗಳನ್ನು ನೀಡಿದ ನಿದರ್ಶನಗಳಿವೆ. ಈಗ ಖಾಲಿ ಇರುವ ಮಹಿಳಾನ ಸ್ಥಾನವನ್ನು ಬೆಳಗಾವಿ ಜಿಲ್ಲೆಗೆ ನೀಡಬೇಕೆಂಬ ಬೇಡಿಕೆ ಇದೆ.
ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸಚಿವೆ ಮಾಡಿದರೆ ಹೆಚ್ಚು ಖುಷಿಪಡುವವ ನಾನೇ ಎಂದರು. ಮಂತ್ರಿಯಾಗುವ ಆಸೆ ಎಲ್ಲ ಶಾಸಕರಿಗೂ ಇರುತ್ತದೆ. ಆದರೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿಯಾಗುತ್ತದೆ ಎಂದಿದ್ದ ಬಿಜೆಪಿಯವರ ಮಾತು ಸುಳ್ಳಾಗಿದೆ.
ವಾರ್ಷಿಕ ಸುಮಾರು ೫೦,೦೦೦ ದಿಂದ ೫೫,೦೦೦ ಕೋಟಿ ವೆಚ್ಚದ ಕರ್ನಾಟಕದ ಈ ಮಾದರಿಯನ್ನು, ದೇಶದ ಇತರೆ ರಾಜ್ಯಗಳೂ ಅನುಸರಿಸುತ್ತಿವೆ ಎಂದರು. ಶಾಸಕ ಸತೀಶ್ ಸೈಲ್, ಎಂಎಲ್ಸಿ ಗಣಪತಿ ಉಳ್ವೇಕರ್ , ಜಿಲ್ಲಾಧಿಕಾರಿ ,ಸಿಇಒ ಅವರ ಜೊತೆಗೆ ಇದ್ದರು.




















