SK Home Ad
Home ನಮ್ಮ ಜಿಲ್ಲೆ ಧಾರವಾಡ ಎಸ್‌ಐಆರ್: ಧಾರವಾಡ ಡಿಸಿ ಜೊತೆ `ಸಂ.ಕ.’ ಅರ್ಥಪೂರ್ಣ ಫೋನ್ ಇನ್

ಎಸ್‌ಐಆರ್: ಧಾರವಾಡ ಡಿಸಿ ಜೊತೆ `ಸಂ.ಕ.’ ಅರ್ಥಪೂರ್ಣ ಫೋನ್ ಇನ್

0
101

ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್) ಯಾವುದೇ ಮತದಾರರೂ ತೊಂದರೆಗೆ ಒಳಗಾಗುವುದಿಲ್ಲ. ಇದೊಂದು ಅತ್ಯಂತ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಆತಂಕ ಇಲ್ಲದೇ ಜನತೆ ಸ್ಪಂದಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಆರ್. ಸ್ನೇಹಲ್ ಹೇಳಿದರು.

ಎಸ್‌ಐಆರ್ ಕುರಿತು ವ್ಯಾಪಕವಾಗಿರುವ ಸಾರ್ವಜನಿಕ ಆತಂಕ ಮತ್ತು ಅನುಮಾನಗಳ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕ' ಪತ್ರಿಕೆ ಏರ್ಪಡಿಸಿದ್ದ ಫೋನ್ ಇನ್‌ನಲ್ಲಿ ಭಾಗಿಯಾಗಿ ಅವರು ಪ್ರತಿಯೊಂದು ಸಣ್ಣ ಅನುಮಾನವನ್ನೂ ಪರಿಹರಿಸಿದರು. ನೂರಾರು ಕರೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು,ಎಸ್‌ಐಆರ್‌ನಿಂದ ಮತಪಟ್ಟಿಯಲ್ಲಿನ ಹೆಸರು ಕೈಬಿಟ್ಟು ಹೋಗಬಹುದು ಎನ್ನುವ ಆತಂಕ ಬಿಲ್‌ಕುಲ್ ಸರಿಯಲ್ಲ’ ಎಂದರು.

`ಯಾವ ಹೆಸರು ಕೈಬಿಡುವುದಕ್ಕಾಗಲೀ, ಯಾರನ್ನೇ ಗುರಿಯಾಗಿಸಿ ಮತಪಟ್ಟಿ ಪರಿಷ್ಕರಣೆ ಮಾಡುವುದಕ್ಕಾಗಲೀ ಎಸ್‌ಐಆರ್ ನಡೆಯುತ್ತಿಲ್ಲ. ಇದೊಂದು ಕಾನೂನುಬದ್ಧ ಪ್ರಕ್ರಿಯೆ. 2002ರಲ್ಲಿ ನಡೆದ ನಂತರ ಆಗಿರಲಿಲ್ಲ ಅಷ್ಟೇ. ಈ ಸಹಜ ಪರಿಷ್ಕರಣೆಗೆ ಆತಂಕ ಪಡುವ ಯಾವುದೇ ಅವಕಶ್ಯಕತೆ ಇಲ್ಲ. ಮತದಾರರು ಅರ್ಜಿಗಳನ್ನು ತುಂಬಿ ಸಹಿ ಮಾಡಿ ಕೊಟ್ಟರಷ್ಟೇ ಸಾಕು. ತಿದ್ದುಪಡಿ, ಘೋಷಣೆ ಇವಕ್ಕೆಲ್ಲ ಅಕ್ಟೋಬರ್ 3ನೇ ತಾರೀಕಿನವರೆಗೆ (ಎಸ್‌ಐಆರ್ ಮುಗಿದ ಮೇಲೆ) ಅವಕಾಶ ಇದ್ದೇ ಇದೆ’ ಎಂದು ಹೇಳಿದರು.

ಧಾರವಾಡ ಜಿಲ್ಲೆಯ ಎಲ್ಲೆಡೆಯಿಂದ ಜನತೆ ತಮ್ಮ ಅನುಮಾನಗಳನ್ನು ಈ ಫೋನ್ ಇನ್‌ನಲ್ಲಿ ಪರಿಹರಿಸಿಕೊಂಡರು. ಅನೇಕ ಅನಗತ್ಯ ಮತ್ತು ಆಧಾರವೇ ಇಲ್ಲದ ಅನುಮಾನಗಳಿಗೂ ಜಿಲ್ಲಾಧಿಕಾರಿಗಳು ಸಮಾಧಾನ ಒದಗಿಸಿದ್ದು ಗಮನಾರ್ಹ. ಎಸ್‌ಐಆರ್ ಆರಂಭದ ದಿನವೇ ಪತ್ರಿಕೆ ಈ ವಿಷಯವಾಗಿ ಫೋನ್ ಇನ್ ಏರ್ಪಡಿಸಿದ್ದು ಹಾಗೂ ಬಿಡುವಿಲ್ಲದ ಒತ್ತಡದ ನಡುವೆಯೂ ಜಿಲ್ಲಾಧಿಕಾರಿಗಳು ಭಾಗವಹಿಸಿ ಉತ್ತರಿಸಿದ್ದು ವಿಶೇಷ.

ಲೋಕ ಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿ ಕೇಶವ್ ದೇಸಾಯಿ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿ, ಟ್ರಸ್ಟ್ ಪ್ರಕಟಣೆಗನ್ನು ನೀಡುವ ಮೂಲಕ ಗೌರವಿಸಿದರು. ಪತ್ರಿಕೆಯ ಸಿಇಓ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ನಿರ್ವಹಿಸಿದರು.