ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ಸೋಮವಾರ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026 ಜಾಗೃತಿ ಜಾಥಾ ಜರುಗಿತು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮತ್ತು ಜಿ.ಪಂ. ಸಿಇಓ ಭುವನೇಶ ಪಾಟೀಲ ಅವರು ಆಕಾಶಕ್ಕೆ ಬಲೂನ್‌ಗಳನ್ನು ಹಾರಿಸುವ ಮೂಲಕ ಬೃಹತ್ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ದೋಷರಹಿತ ಹಾಗೂ ನಿಖರವಾದ ಮತದಾರರ ಪಟ್ಟಿಯ ಅವಶ್ಯಕತೆಯನ್ನು ವಿವರಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕನೂ ಎನ್ಯುಮರೇಷನ್ ಫಾರ್ಮ್ ತಪ್ಪದೇ ಭರ್ತಿ ಮಾಡಿ ಸಲ್ಲಿಸಬೇಕು ಎಂದರು.
ಜಿ.ಪಂ. ಸಿಇಒ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯ ಪಾತ್ರ ಹಿರಿದಾಗಿದ್ದು, ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟರು ಸೇರಿದಂತೆ ಸಾರ್ವಜನಿಕರೆಲ್ಲರೂ ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮತದಾರರ ನೋಂದಣಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸಹಾಯಕ ಅಧಿಕಾರಿ ಉಮೇಶ ಸವಣೂರ, ಪಾಲಿಕೆಯ ವಲಯ ಕಚೇರಿ ಆಯುಕ್ತ ಅರವಿಂದ ಜಮಖಂಡಿ, ಶಂಕರ ಪಾಟೀಲ ಮತ್ತು ರಮೇಶ್ ನೂಲ್ವಿ ಇತರರು ಇದ್ದರು.
ಗಮನ ಸೆಳೆದ ಜಾಥಾ: ಇಲ್ಲಿಯ ಮಹಾನಗರ ಪಾಲಿಕೆ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಮತ್ತು ಜಿ.ಪಂ. ಸಿಇಒ ಭುವನೇಶ ಪಾಟೀಲ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದೋಷಮುಕ್ತ ಮತದಾರರ ಪಟ್ಟಿ-ಬಲಿಷ್ಠ ಪ್ರಜಾಪ್ರಭುತ್ವ ಎಂಬ ಸಂದೇಶ ಸಾರುತ್ತಲೇ ಸಾಗಿದರು.
ಜಾಥಾವು ಮಹಾರಾಣಾ ಪ್ರತಾಪ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುತ್ತ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ನಂತರ ಕಲಾಭವನಕ್ಕೆ ಆಗಮಿಸಿ ಸಂಪನ್ನಗೊಂಡಿತು.




















