Home Advertisement
Home ಕ್ರೀಡೆ IPL 2026: ಕುಸಿದ ಡೆಲ್ಲಿಗೆ ಸ್ಟಬ್ಸ್-ರಿಜ್ವಿ ಆಸರೆ, ಸಿಎಸ್‌ಕೆಗೆ 156 ರನ್‌ ಗುರಿ

IPL 2026: ಕುಸಿದ ಡೆಲ್ಲಿಗೆ ಸ್ಟಬ್ಸ್-ರಿಜ್ವಿ ಆಸರೆ, ಸಿಎಸ್‌ಕೆಗೆ 156 ರನ್‌ ಗುರಿ

0
13

ದೆಹಲಿ: ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಮೀರ್ ರಿಜ್ವಿ ಅವರ ಆಸರೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 156 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.

ಇಲ್ಲಿನ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ 48ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು.

ಆರಂಭದಲ್ಲಿಯೇ ಡೆಲ್ಲಿ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಚೆನ್ನೈ ಬೌಲರ್‌ಗಳು ಪಾವರ್‌ ಪ್ಲೇ ಮುಗಿಯುವುದರೊಳಗೆ ಪಾತುಂ ನಿಸ್ಸಾಂಕ (19) ಮತ್ತು ಕೆ.ಎಲ್‌. ರಾಹುಲ್‌ (12) ಅವರನ್ನು ಪೆವಿಲಿಯನ್‌ಗೆ ಸೇರಿಸಿದರು.

ಬಳಿಕ ಬಂದ ನಿತೀಶ್‌ ರಾಣಾ (15) ಕರುಣ ನಾಯರ್‌ (13) ಮತ್ತು ಅಕ್ಷರ ಪಟೇಲ್‌ (2) ಕೂಡ ಬಹುಬೇಗನೆ ವಿಕೆಟ್‌ ಒಪ್ಪಿಸಿ ಹೊರನಡೆದರು. 11 ಓವರ್‌ಗಳಲ್ಲಿಯೇ 69 ರನ್‌ಗಳಿಗೆ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಮೀರ್ ರಿಜ್ವಿ ಜೋಡಿ 65 ರನ್‌ಗಳ ಜತೆಯಾಟ ನಡೆಸಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಸ್ಟಬ್ಸ್ 31 ಎಸೆತದಲ್ಲಿ 1 ಬೌಂಡರಿ, 2 ಸಿಕ್ಸರ್‌ನಿಂದ 38 ರನ್‌ಗಳಿಸಿ ಔಟಾದರು.

ಸಮೀರ್ ರಿಜ್ವಿ 24 ಎಸೆತದಲ್ಲಿ 4 ಸಿಕ್ಸರ್‌ನಿಂದ 40 ರನ್‌ಗಳಿಸಿ ಅಜೇಯರಾಗಿ ಉಳಿದರೆ, ಅಶುತೋಷ್ ಶರ್ಮಾ ಕೊನೆಗೆ ಕ್ರಿಸ್‌ಗೆ ಬಂದು 5 ಎಸೆತದಲ್ಲಿ 2 ಸಿಕ್ಸರ್‌ನಿಂದ 14 ರನ್‌ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.