Home Advertisement
Home ನಮ್ಮ ಜಿಲ್ಲೆ ದಾವಣಗೆರೆ 2028ರಲ್ಲಿ ಬಿಜೆಪಿ ಅಧಿಕಾರಕ್ಕೆ: ವಿಜಯೇಂದ್ರ ವಿಶ್ವಾಸ

2028ರಲ್ಲಿ ಬಿಜೆಪಿ ಅಧಿಕಾರಕ್ಕೆ: ವಿಜಯೇಂದ್ರ ವಿಶ್ವಾಸ

0
18

ದಾವಣಗೆರೆ: ರಾಜ್ಯದಲ್ಲಿ ಕಳೆದು ಹೋದ ಬಿಜೆಪಿಯ ಗತವೈಭವವನ್ನು ಮರುಸ್ಥಾಪಿಸಿ, 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ, ಸೋಲಿನಿಂದ ಪಕ್ಷದ ಕಾರ್ಯಕರ್ತರು ಎದಗುಂದಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವ ಅವಶ್ಯಕತೆಯಿದೆ. ಇದಕ್ಕಾಗಿ ಹಿರಿಯರ ಮಾರ್ಗದರ್ಶನದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನಾತ್ಮಕ ಹೋರಾಟ ರೂಪಿಸಲಾಗುವುದು’ ಎಂದರು.

ʻಯಡಿಯೂರಪ್ಪನವರು ಶೂನ್ಯದಿಂದ ಪಕ್ಷವನ್ನು ಕಟ್ಟಿ, ಹತ್ತಾರು ಸವಾಲು ಮತ್ತು ಹೋರಾಟಗಳನ್ನು ಎದುರಿಸಿ ಗೆದ್ದಿದ್ದಾರೆ. ಅವರ ಹೋರಾಟದ ಹಾದಿಯೇ ನಮಗೆಲ್ಲರಿಗೂ ಸ್ಫೂರ್ತಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಮುನ್ನಡೆಯಬೇಕು’ ಎಂದು ಕರೆ ನೀಡಿದರು.

ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಮತದಾರರ ಒಲವು ಆಡಳಿತಾರೂಢ ಪಕ್ಷದ ಪರವಾಗಿರುವುದು ಸಹಜ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳನ್ನು ಗೆದ್ದಿದ್ದ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಶ್ರೀನಿವಾಸ್ ದಾಸ ಕರಿಯಪ್ಪನವರು ಸುಮಾರು 64,000 ಮತಗಳನ್ನು ಪಡೆಯುವ ಮೂಲಕ ಉತ್ತಮ ಪೈಪೋಟಿ ನೀಡಿದ್ದಾರೆ. “ಕ್ಷೇತ್ರದಲ್ಲಿ ಗೆಲುವಿನ ವಾತಾವರಣವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬರಲಿಲ್ಲ. ನಾವು 70,000 ಮತಗಳ ಗುರಿ ಹೊಂದಿದ್ದೆವು. ಆದರೆ, ಕೊನೆ ಗಳಿಗೆಯಲ್ಲಿ ನಮ್ಮ ಶ್ರಮ ಸಾಲದಾಯಿತು. ಚುನಾವಣೆಯನ್ನು ಗೆಲ್ಲಲು ತಂತ್ರಗಾರಿಕೆ ಮತ್ತು ಕುತಂತ್ರ ಎರಡೂ ಇರುತ್ತದೆ. ಈ ಬಾರಿ ಕಾಂಗ್ರೆಸ್ ಅದರಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಭಾಗದ 8 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿಗೆ ಸುಮಾರು 5,000 ಮತಗಳ ಮುನ್ನಡೆಯ ನಿರೀಕ್ಷೆ ಇತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮತಗಳು ಬರದೆ ಕೇವಲ 1,600 ಮತಗಳ ಮುನ್ನಡೆ ಸಿಕ್ಕಿದೆ ಎಂದರು.

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ನಾವು 100% ಪ್ರಯತ್ನ ಹಾಕಿದ್ದೇವೆ ಮತ್ತು ಇದಕ್ಕಿಂತ ಉತ್ತಮವಾಗಿ ಸಂಘಟಿತವಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದ ಅವರು, ಉಪ ಚುನಾವಣೆಯಲ್ಲಿ ಅದೃಷ್ಟ ನಮ್ಮ ಕಡೆಗೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿರುದ್ಧ ಬಿಜೆಪಿ ಸಾಧಿಸುತ್ತಿರುವ ಪ್ರಗತಿಯನ್ನು ಅಭೂತಪೂರ್ವವಾದುದು. “ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಶ್ರಮಿಸಿದ ಶ್ರೀನಿವಾಸ್ ದಾಸ್ ಕರಿಯಪ್ಪ, ಅಜಯ್ ಕುಮಾರ್, ಶಿವಕುಮಾರ್ ಮತ್ತು ಯಶವಂತ್ ರಾವ್ ಜಾಧವ್ ಸೇರಿದಂತೆ ಇತರ ಮುಖಂಡರ ಕಾರ್ಯವೈಖರಿಯನ್ನು ಅವರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಜನಬೆಂಬಲ ಗಳಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.