ಬೆಳಗಾವಿ: ತವರಿನಲ್ಲಿರುವ ಪತ್ನಿಯ ಜತೆ ವಿಡಿಯೋ ಕಾಲ್ ಮಾಡಿ ಮಾತನಾಡಲು ಅಡ್ಡಿಪಡಿಸುತ್ತಿದ್ದ ಅತ್ತೆಯ ಮೇಲೆ ಚಾಕುವಿನಿಂದ ಇರಿದು ಗಂಭೀರ ಹಲ್ಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅರವಿಂದ ಗವಳಿ (26) ಎಂಬುವನೇ ಹೆಣ್ಣು ಕೊಟ್ಟ ಅತ್ತೆಯ ಮೇಲೆ ಅಮಾನವೀಯವಾಗಿ ಚಾಕು ಇರಿದ ಅಳೀಮಯ್ಯ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾದೇವಿ ಕರಿಗಾರ (45) ಅರವಿಂದನಿಗೆ ಮಗಳನ್ನು ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಕಳೆದೆರಡು ತಿಂಗಳ ಹಿಂದೆಯಷ್ಟೇ ಅರವಿಂದ ಪತ್ನಿಗೆ ಚೊಚ್ಚಲ ಹೆರಿಗೆಯಾಗಿ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು.
ಆದರೆ ಈ ಮಧ್ಯೆ ದಿನಕ್ಕೆ ಹತ್ತಿಪ್ಪತ್ತು ಸಲ ಪತ್ನಿಗೆ ವಿಡಿಯೋ ಕರೆ ಮಾಡಿ ಸತಾಯಿಸುತ್ತಿದ್ದ ಅರವಿಂದ ಮಗುವನ್ನು ತೋರಿಸು ಎಂದು ದುಂಬಾಲು ಬೀಳುತ್ತಿದ್ದ. ಅಳಿಯನ ಕಿತಾಪತಿಯಿಂದ ಬಾಣಂತಿ ಮಗಳು ತೊಂದರೆ ಅನುಭವಿಸುತ್ತಿರುವುದನ್ನು ಕಂಡ ಅತ್ತೆ ಮಹಾದೇವಿ ಹೀಗೆ ದಿನಕ್ಕೆ ಹಲವು ಸಲ ಕರೆ ಮಾಡಬೇಡ. ಬಾಣಂತಿ ಜಾಸ್ತಿ ಮೊಬೈಲ್ ಬಳಕೆ ಮಾಡಬಾರದು. ಒಮ್ಮೆ ಕರೆ ಮಾಡಿ ಮಾತಾಡಿದ್ರೆ ಸಾಕು ಎಂದು ಬುದ್ದಿಹೇಳಿದ್ದಳು.
ಇದರಿಂದ ಕೋಪಗೊಂಡ ಅಳಿಯ ಅರವಿಂದ ಅತ್ತೆಯ ಜತೆ ಜಗಳ ತೆಗೆದು ಆಕೆಯ ಮೇಲೆ ಚಾಕುವಿನಿಂದ ತಿವಿದು ತೀವ್ರ ಗಾಯಗೊಳಿಸಿ ಪರಾರಿಯಾಗಿದ್ದಾನೆ. ನಂತರ ತನ್ನ ವಾಟ್ಸಾಪ್‌ನಲ್ಲಿ `ಇಂದು ಜೈಲು ನಾಳೆ ಬೇಲು.. ನಿನ್ನನ್ನು ಬಿಡಲ್ಲ, ವೇಯ್ಟ್ ಅಂಡ್ ಸೀʼ ಎಂದು ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದಾನೆ.
ಗಾಯಾಳು ಮಹಾದೇವಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























