SK Home Ad
Home ಕ್ರೀಡೆ ರೋಹಿತ್-ಕೊಹ್ಲಿ ನಡುವೆ ಶತಕ ಸಿಡಿಸೋದು ಯಾರು?: ಅಚ್ಚರಿಯ ಭವಿಷ್ಯ ನುಡಿದ ಚೇತೇಶ್ವರ ಪೂಜಾರ!

ರೋಹಿತ್-ಕೊಹ್ಲಿ ನಡುವೆ ಶತಕ ಸಿಡಿಸೋದು ಯಾರು?: ಅಚ್ಚರಿಯ ಭವಿಷ್ಯ ನುಡಿದ ಚೇತೇಶ್ವರ ಪೂಜಾರ!

0
80

ನ್ಯೂಜಿಲೆಂಡ್ ವಿರುದ್ಧ ನವೆಂಬರ್ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಬಹುನಿರೀಕ್ಷಿತ ಏಕದಿನ ಸರಣಿಗೂ ಮುನ್ನ, ಭಾರತದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಯಾರು ಶತಕ ಸಿಡಿಸುವ ಸಾಧ್ಯತೆ ಹೆಚ್ಚು ಎಂಬುದರ ಬಗ್ಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆಸಕ್ತಿಕರ ವಿಶ್ಲೇಷಣೆ ನಡೆಸಿದ್ದಾರೆ. ಮುಂಬರುವ ಸರಣಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾಗಿಂತ ರನ್ ಮಷಿನ್ ವಿರಾಟ್ ಕೊಹ್ಲಿ ಶತಕ ಬಾರಿಸುವ ಅವಕಾಶ ತುಸು ಹೆಚ್ಚಿದೆ ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಪೂಜಾರ, “ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ತಂಡಕ್ಕೆ ಆಕ್ರಮಣಕಾರಿ ಆರಂಭ ಒದಗಿಸುವ ಪಾತ್ರ ನಿಭಾಯಿಸುತ್ತಾರೆ. ಕಿವೀಸ್ ನೆಲದ ಪರಿಸ್ಥಿತಿಯಲ್ಲಿ ಅವರ ಪಾತ್ರ ಸ್ವಲ್ಪ ಬದಲಾಗಬಹುದು. ಆದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ಇನಿಂಗ್ಸ್ ಕಟ್ಟಿ ಆ್ಯಂಕರ್ ಪಾತ್ರ ನಿರ್ವಹಿಸುತ್ತಾರೆ.

ಏಕದಿನ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದ ಬ್ಯಾಟರ್‌ಗೆ ಶತಕ ಗಳಿಸುವುದು ತುಸು ಸುಲಭ. ಆದ್ದರಿಂದ ನ್ಯೂಜಿಲೆಂಡ್ ವಾತಾವರಣದಲ್ಲಿ ರೋಹಿತ್‌ಗಿಂತ ಕೊಹ್ಲಿ ಶತಕ ಸಿಡಿಸುವ ಸಾಧ್ಯತೆ ಹೆಚ್ಚಿದೆ” ಎಂದು ಬ್ಯಾಟಿಂಗ್ ಕ್ರಮಾಂಕದ ಲೆಕ್ಕಾಚಾರ ಮುಂದಿಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯಲ್ಲಿ ಇಬ್ಬರೂ ಭರ್ಜರಿ ಫಾರ್ಮ್‌ನಲ್ಲಿದ್ದು, ರೋಹಿತ್ 225 ರನ್ ಮತ್ತು ಕೊಹ್ಲಿ ಅಜೇಯ 139 ರನ್ ಸಿಡಿಸಿ ಮಿಂಚಿದ್ದರು.

ಇದೇ ವೇಳೆ ಮುಂಬರುವ 5 ಪಂದ್ಯಗಳ ಏಕದಿನ ಸರಣಿ ಫಲಿತಾಂಶದ ಬಗ್ಗೆಯೂ ಭವಿಷ್ಯ ನುಡಿದ ಪೂಜಾರ, ಸರಣಿಯು 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯಗೊಳ್ಳಬಹುದು ಎಂದಿದ್ದಾರೆ. ಭಾರತ ಮೊದಲ ಮೂರು ಪಂದ್ಯಗಳಿಗೆ ಒಂದು ತಂಡವನ್ನು, ನಂತರದ ಎರಡು ಪಂದ್ಯಗಳಿಗೆ ಬೇರೆ ಆಟಗಾರರನ್ನು ಆಡಿಸುತ್ತಿರುವುದರಿಂದ ಆತಿಥೇಯ ನ್ಯೂಜಿಲೆಂಡ್‌ಗೆ ಕೊಂಚ ಲಾಭವಾಗಲಿದೆ. ಅಲ್ಲದೆ ಕಿವೀಸ್ ನೆಲದಲ್ಲಿ ಮಳೆಯ ಪ್ರಭಾವ ಹೆಚ್ಚಾಗಿರುವುದರಿಂದ ಒಂದು ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.