Home Advertisement
Home ಕ್ರೀಡೆ IPL 2026: ಚೆನ್ನೈಗೆ 160 ರನ್‌ ಗುರಿ ನೀಡಿದ ಮುಂಬೈ

IPL 2026: ಚೆನ್ನೈಗೆ 160 ರನ್‌ ಗುರಿ ನೀಡಿದ ಮುಂಬೈ

0
55

ಚೆನ್ನೈ: ನಮನ್ ಧೀರ್ ಅರ್ಧಶತಕದ ನೆರವಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸಾಧಾರಣ ಮೊತ್ತವನ್ನು ಪೇರಿಸಿದೆ.

ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಬ್ಯಾಂಟಿಗ್‌ ಆಯ್ದುಕೊಂಡು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತು.

ಆರಂಭದಲ್ಲಿಯೇ ವಿಲ್‌ ಜಾಕ್ಸ್‌ ಕೇವಲ ಒಂದು ರನ್‌ಗಳಿಸಿ ಹೊರ ನಡೆದಿದ್ದು, ಮುಂಬೈ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ವೇಳೆ ರಯಾನ್ ರಿಕೆಲ್ಟನ್ ಮತ್ತು ನಮನ್ ಧೀರ್ ಜೋಡಿ 32 ಎಸೆತದಲ್ಲಿ 58 ರನ್‌ಗಳ ಜತೆಯಾಟ ನಡೆಸಿ ತಂಡದ ರನ್‌ರೇಟ್‌ ಹೆಚ್ಚಿಸಿದರು.

ರಿಕೆಲ್ಟನ್ 24 ಎಸೆತದಲ್ಲಿ 5 ಸಿಕ್ಸರ್‌ನೊಂದಿಗೆ 37 ರನ್‌ ಸಿಡಿಸಿ ನೂರ್‌ ಅಹ್ಮದ್‌ ಎಸೆತದಲ್ಲಿ ಔಟಾದರು. ಬಳಿಕ ಕ್ರಿಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಕೇವಲ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್‌ನಿಂದ 21 ರನ್‌ ಚಚ್ಚಿ ಪೆವಿಲಿಯನ್‌ ಸೇರಿದರು.

10.4 ಓವರ್‌ಗಳಲ್ಲಿ 99 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಮುಂಬೈಗೆ ನಂತರ ಬಂದ ಆಟಗಾರರು ಬಹಳ ಹೊತ್ತು ಕ್ರಿಸ್‌ನಲ್ಲಿ ನಿಲ್ಲದೆ ಹಿಂತಿರುಗಿದ್ದು, ತಂಡದ ಮೊತ್ತ ಕುಸಿಯಲು ಕಾರಣವಾಯಿತು.

ಹಾರ್ದಿಕ್‌ ಪಾಂಡ್ಯ ಕೂಡ 23 ಎಸತಗಳಿಂದ 18 ರನ್‌ಗಳಿಸಿದ್ದು, ಬಿಟ್ಟರೆ ನಂತರದ ಯಾವೊಬ್ಬ ಆಟಗಾರನೂ ಎರಡಂಕಿಯ ರನ್‌ ಗಳಿಸಲಿಲ್ಲ. ಅಂತಿಮವಾಗಿ ಮುಂಬೈ 159 ರನ್‌ ಗಳಿಸಿತು.

ಚೆನ್ನೈ ಪರ ಅನ್ಶುಲ್ ಕಾಂಬೋಜ್ 32ಕ್ಕೆ 3 ವಿಕೆಟ್‌ ಪಡೆದರೆ, ನೂರ್‌ ಅಹ್ಮದ್‌ 26ಕ್ಕೆ 2 ವಿಕೆಟ್‌ ಪಡೆದರು. ರಾಮಕೃಷ್ಣ ಘೋಷ್‌ ಜೇಮೀ ಓವರ್ಟನ್ ತಲಾ ಒಂದು ವಿಕೆಟ್‌ ಪಡೆದರು.