SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಹೆಲಿಕಾಪ್ಟರ್ ದುರಂತದಲ್ಲಿ ಅರಟಾಳದ ಪೊಲೀಸ್ ಅಧಿಕಾರಿ ಸಾವು; ಹುಟ್ಟೂರಿನಲ್ಲಿ ನೀರವ ಮೌನ

ಹೆಲಿಕಾಪ್ಟರ್ ದುರಂತದಲ್ಲಿ ಅರಟಾಳದ ಪೊಲೀಸ್ ಅಧಿಕಾರಿ ಸಾವು; ಹುಟ್ಟೂರಿನಲ್ಲಿ ನೀರವ ಮೌನ

0
1

ಬೆಳಗಾವಿ(ಅರಟಾಳ): ಉತ್ತರಾಖಂಡದ ಪವಿತ್ರ ಬದರಿನಾಥ ಧಾಮದಿಂದ ಫಾಟಾ ಕಡೆಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪ ಪತನಗೊಂಡಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರಾದ ಬೆಂಗಳೂರು ಸಿಸಿಬಿ ಸಿಪಿಐ ಅರುಣ ಮನೋಹರ ಸಾಳುಂಕೆ ಸೇರಿದಂತೆ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಈ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರಾದ ಅರಟಾಳದಲ್ಲಿ ತೀವ್ರ ಶೋಕ ಹಾಗೂ ನೀರವ ಮೌನ ಆವರಿಸಿದೆ.

ಬಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಅರುಣ ಸಾಳುಂಕೆ ಅವರ ಬಾಲ್ಯ ಅತ್ಯಂತ ಸವಾಲುಗಳಿಂದ ಕೂಡಿತ್ತು. ಅಂದು ಸಮರ್ಪಕ ರಸ್ತೆ ಸಂಪರ್ಕವಿಲ್ಲದ, ಬಸ್ ಸೌಲಭ್ಯವೂ ಕಾಣದ ಸೈಕಲ್ ಮೇಲೆ ಓಡಾಡುವ ಕಾಲದಲ್ಲಿ, ಕುಗ್ರಾಮ ಅರಟಾಳದಲ್ಲಿ ಜನಿಸಿದ ಇವರು, ಹಳ್ಳಿ ಮೇಲಿನ ಪ್ರೀತಿ ಮತ್ತು ಕಠಿಣ ಪರಿಶ್ರಮದಿಂದಲೇ ಮೇಲೆ ಬಂದವರು.

ದೂರದ ಪಟ್ಟಣಗಳಿಗೆ ಬುತ್ತಿಕಟ್ಟಿಕೊಂಡು ಹೋಗಿ, ಆರ್ಥಿಕ ಸಮಸ್ಯೆಗಳನ್ನು ಎಸುರಿಸಿ ಶಿಕ್ಷಣ ಕಲಿಯುವುದೇ ದುಸ್ತರವಾಗಿದ್ದ ಆ ದಿನಗಳಲ್ಲಿ ಐಗಳಿಯ ಶ್ರೀ ಅಪ್ಪಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಪೂರ್ಣಗೊಳಿಸಿದರು. ನಂತರ ಜಮಖಂಡಿಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ ತಮ್ಮ ಛಲ ಸಾಬೀತು ಪಡಿಸಿದರು.

2007ರಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ನೇಮಕಗೊಂಡ ಅರುಣ ಅವರು ಪ್ರಾಮಾಣಿಕ ಸೇವೆಯಿಂದ ಹಂತಹಂತವಾಗಿ ಬಡ್ತಿ ಪಡೆದು, ಪ್ರಸ್ತುತ ರಾಜಧಾನಿ ಬೆಂಗಳೂರಿನ ಸಿಸಿಬಿ ವಿಭಾಗದಲ್ಲಿ ಸಿಪಿಐ ಕರ್ತವ್ಯ ನಿರ್ವಹಿಸುತ್ತಿದ್ದರು. ಕೂಲಿ-ನಾಲಿ ಮಾಡುವ ರೈತರ ಮಕ್ಕಳು ಹಾಗೂ ಗ್ರಾಮೀಣ ಯುವಕರಿಗೆ ಅಕ್ಷರದ ಮಹತ್ವ ಮತ್ತು ಕಠಿಣ ಪರಿಶ್ರಮದ ಬಲವನ್ನು ಸಾರಿದ ಇವರು, ತಾವೇ ಉನ್ನತ ಅಧಿಕಾರಿಯಾಗಿ ಯುವಪೀಳಿಗೆಗೆ ದೊಡ್ಡ ಆದರ್ಶವಾಗಿದ್ದರು.

ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರೂ ಕಿಂಚಿತ್ತೂ ಅಹಂಕಾರ ತೋರದೆ, ಊರಿನ ಜನರೊಂದಿಗೆ ಸರಳತೆ, ವಿನಯತೆಯಿಂದ ಬೆರೆತು ತಂದೆ-ತಾಯಿಯ ಮೆಚ್ಚಿನ ಪುತ್ರನಾಗಿ ಗುರುತಿಸಿಕೊಂಡಿದ್ದರು.

ಮೃತರು ತಂದೆ ಮನೋಹರ ಸಾಳುಂಕೆ, ತಾಯಿ ಸಂಜೀವಿನಿ, ಪತ್ನಿ ಅರ್ಚನಾ, ಪುತ್ರ ವಲ್ಲಭ, ಪುತ್ರಿ ಲಾವಣ್ಯ, ಸಹೋದರ ಅಮರ ಸಾಳುಂಕೆ, ಸಹೋದರಿ ಸುನಿತಾ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಮಿತ್ರರನ್ನು ಅಗಲಿದ್ದಾರೆ. ಗ್ರಾಮದ ಹೆಮ್ಮೆಯ ಅಧಿಕಾರಿಯ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿದೆ.