SK Home Ad
Home ಸುದ್ದಿ ವಿದೇಶ 20 ನಿಮಿಷಗಳಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಕ್ರಿಪ್ಟೋ ದರೋಡೆ: ಬೈನಾನ್ಸ್‌ನಿಂದ ರೂ.52 ಸಾವಿರ ಕೋಟಿ ಲೂಟಿ!

20 ನಿಮಿಷಗಳಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಕ್ರಿಪ್ಟೋ ದರೋಡೆ: ಬೈನಾನ್ಸ್‌ನಿಂದ ರೂ.52 ಸಾವಿರ ಕೋಟಿ ಲೂಟಿ!

0
72

ಜಗತ್ತಿನ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ‘ಬೈನಾನ್ಸ್’ (Binance) ಇತಿಹಾಸದಲ್ಲೇ ಹಿಂದೆಂದೂ ಕಾಣದ ಭೀಕರ ಸೈಬರ್ ದಾಳಿಗೆ ತುತ್ತಾಗಿದ್ದು, ಬರೋಬ್ಬರಿ 6.3 ಬಿಲಿಯನ್ ಡಾಲರ್ (ಅಂದಾಜು ರೂ.52,000 ಕೋಟಿಗೂ ಅಧಿಕ) ಮೌಲ್ಯದ ಕ್ರಿಪ್ಟೋಕರೆನ್ಸಿ ಲೂಟಿಯಾಗಿದೆ.

ವಹಿವಾಟು ಪ್ರಕ್ರಿಯೆಗೆ ಬಳಸಲಾಗುವ ವಾಲೆಟ್‌ಗಳಿಂದ ಕೇವಲ 20 ನಿಮಿಷಗಳಲ್ಲಿ ಈ ಮಹಾ ದರೋಡೆ ನಡೆದಿದ್ದು, ಕ್ರಿಪ್ಟೋ ಜಗತ್ತನ್ನೇ ತಲ್ಲಣಗೊಳಿಸಿದೆ.  ಉದ್ಯೋಗಿಯೊಬ್ಬರ ಲ್ಯಾಪ್‌ಟಾಪ್ ಹ್ಯಾಕ್ ಆಗಿದ್ದರ ಪರಿಣಾಮವಾಗಿ ಹ್ಯಾಕರ್‌ಗಳು ಸರ್ವಿಸ್ ಕಂಟೇನರ್‌ಗೆ ಪ್ರವೇಶ ಪಡೆದಿದ್ದು, ವಹಿವಾಟುಗಳಿಗೆ ಅನುಮೋದನೆ ನೀಡುವ ಆಂತರಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಹಣವನ್ನು ಬೇರೆಡೆ ವರ್ಗಾಯಿಸಿದ್ದಾರೆ ಎಂದು ಬೈನಾನ್ಸ್ ತಿಳಿಸಿದೆ.

ಅಮೆರಿಕ ಮೂಲದ ಪ್ರಸಿದ್ಧ ಬ್ಲಾಕ್‌ಚೈನ್ ವಿಶ್ಲೇಷಣಾ ಸಂಸ್ಥೆಗಳಾದ ‘ಟಿಆರ್‌ಎಂ ಲ್ಯಾಬ್ಸ್’ (TRM Labs) ಮತ್ತು ‘ಚೈನಾ ಅನಾಲಿಸಿಸ್’ (Chainalysis), ಈ ಕೃತ್ಯದ ಹಿಂದೆ ಉತ್ತರ ಕೊರಿಯಾದ ಕುಖ್ಯಾತ ಹ್ಯಾಕಿಂಗ್ ತಂಡ ‘ಟ್ರೇಡರ್‌ಟ್ರೇಟರ್’ (TraderTraitor) ಕೈವಾಡವಿರಬಹುದು ಎಂದು ಬಲವಾದ ಅನುಮಾನ ವ್ಯಕ್ತಪಡಿಸಿವೆ.

ಗ್ರಾಹಕರ ಹಿತರಕ್ಷಣೆಗೆ ಧಾವಿಸಿರುವ ಬೈನಾನ್ಸ್ ಸಿಇಒ ರಿಚರ್ಡ್ ಟೆಂಗ್, “ಬಳಕೆದಾರರ ಹಣ ಸಂಪೂರ್ಣ ಸುರಕ್ಷಿತವಾಗಿದೆ” ಎಂದು ಅಭಯ ನೀಡಿದ್ದಾರೆ. ನಷ್ಟವನ್ನು ಸರಿದೂಗಿಸಲು ಸಂಸ್ಥೆಯು ತುರ್ತಾಗಿ 6.34 ಬಿಲಿಯನ್ ಡಾಲರ್ ಮೀಸಲು ನಿಧಿಯನ್ನು ತೆಗೆದಿರಿಸಿದೆ.

ಮುಂಜಾಗ್ರತಾ ಕ್ರಮವಾಗಿ ಠೇವಣಿ ಮತ್ತು ಡ್ರಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ ಕಳುವಾದ ಮೊತ್ತದಲ್ಲಿ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ಸ್ವತ್ತುಗಳನ್ನು ಪಾಲುದಾರರ ನೆರವಿನಿಂದ ಫ್ರೀಜ್ ಮಾಡಲಾಗಿದೆ. ಮುಂದಿನ 45 ಗಂಟೆಗಳ ಒಳಗಾಗಿ ಹಣ ಹಿಂಪಡೆಯುವಿಕೆ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ ಎಂದು ಬೈನಾನ್ಸ್ ಸ್ಪಷ್ಟಪಡಿಸಿದೆ.