ದಾವಣಗೆರೆ: ದರಖಾಸ್ತು ಜಮೀನು ಪೋಡಿಯ ತಾಂತ್ರಿಕ ವರದಿಗೆ 50 ಸಾವಿರ ರೂ. ಲಂಚ ಪಡೆದ ಚನ್ನಗಿರಿ ತಾಲೂಕು ಸರ್ವೆ ಸೂಪರ್‌ವೈಸರ್ ಕೆ.ಎಚ್. ಆಂಜನಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಹಳೆ ಬಸ್ ನಿಲ್ದಾಣದ ಸಮೀಪ ಶುಕ್ರವಾರ ರಾತ್ರಿ ಲಂಚ ಪಡೆಯುತ್ತಿದ್ದ ಆಂಜನಪ್ಪ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಚನ್ನಗಿರಿ ತಾಲೂಕಿನ ಮಧುರ ನಾಯಕನಹಳ್ಳಿಯ ಸರ್ವೆ ನಂಬರ್ 46ರಲ್ಲಿ ಎ.ಬಿ. ಕುಮಾರ ನಾಯ್ಕ ಅವರು 4 ಎಕರೆ ದರಖಾಸ್ತು ಜಮೀನು ಹದ್ದುಬಸ್ತಿಗೆ ಭೂದಾಖಲೆಗಳ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಪೋಡಿ ರದ್ದು ಹಾಗೂ ದುರಸ್ತಿ ಮಾಡದೇ ಅಳತೆ ಸಾಧ್ಯವಿಲ್ಲ ಎಂದು ಸರ್ವೇಯರ್ ಹಿಂಬರಹ ನೀಡಿದ್ದರು. ಈ ಕುರಿತು ಕುಮಾರ ನಾಯ್ಕ ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಪರಿಶೀಲಿಸಿದ ಜಂಟಿ ನಿರ್ದೇಶಕರು ತಾಂತ್ರಿಕ ವರದಿ ನೀಡುವಂತೆ ತಾಲೂಕು ಸಹಾಯಕ ನಿರ್ದೇಶಕರಿಗೆ (ಎಡಿಎಲ್‌ಆರ್) ಸೂಚಿಸಿದ್ದರು. ಈ ಹೊಣೆಯನ್ನು ಸರ್ವೆ ಸೂಪರ್‌ವೈಸರ್ ಕೆ.ಎಚ್. ಆಂಜನಪ್ಪ ಅವರಿಗೆ ವಹಿಸಲಾಗಿತ್ತು. ಏ. 2ರಂದು ಜಮೀನಿಗೆ ಧಾವಿಸಿದ ಆಂಜನಪ್ಪ ಸರ್ವೆ ಕಾರ್ಯ ಪೂರ್ಣಗೊಳಿಸಿದ್ದರು.
‘ಪೋಡಿಯ ತಾಂತ್ರಿಕ ವರದಿಯನ್ನು ಅರ್ಜಿದಾರರ ಪರವಾಗಿ ನೀಡಲು ಕುಮಾರ ನಾಯ್ಕ ಅವರಿಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಕುಮಾರನಾಯ್ಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನಗರದ ಹಳೆ ಬಸ್ ನಿಲ್ದಾಣದ ಬಳಿ ಆಂಜನಪ್ಪ ಅವರ ಸ್ನೇಹಿತ ಶ್ರೀಧರ್‌ಗೆ 50 ಸಾವಿರ ರೂ. ತಲುಪಿಸಿದಾಗ ದಾಳಿ ನಡೆಸಲಾಗಿತ್ತು. ಬಳಿಕ ಸರ್ವೆ ಸೂಪರ್‌ವೈಸರ್ ಅವರನ್ನೂ ಬಂಧಿಸಲಾಯಿತು’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ.






















