SK Home Ad
Home ಕ್ರೀಡೆ ನೆಟ್ಸ್‌ನಲ್ಲಿ ಗಿಲ್ ಹಣೆಗೆ ಕಟ್ಟಿದ್ದ ವಿಚಿತ್ರ ಡಿವೈಸ್ ಏನು?! ಕಣ್ಣಿಗೆ ಕಟ್ಟುವಂತಿದೆ ಜೊಮ್ಯಾಟೊ ಸಿಇಒ ಹೊಸ...

ನೆಟ್ಸ್‌ನಲ್ಲಿ ಗಿಲ್ ಹಣೆಗೆ ಕಟ್ಟಿದ್ದ ವಿಚಿತ್ರ ಡಿವೈಸ್ ಏನು?! ಕಣ್ಣಿಗೆ ಕಟ್ಟುವಂತಿದೆ ಜೊಮ್ಯಾಟೊ ಸಿಇಒ ಹೊಸ ಅವಿಷ್ಕಾರ!

0
55

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಮುನ್ನಡೆ ಸಾಧಿಸಿರುವ ನಡುವೆಯೇ, ಆಕ್ಲೆಂಡ್ ಅಂಗಳದಲ್ಲಿ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಎಲ್ಲರ ಚಿತ್ತ ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕ ಶುಭಮನ್ ಗಿಲ್ ಕಡೆಗೆ ನೆಟ್ಟಿದೆ.

ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಗಿಲ್ ತಮ್ಮ ಹಣೆ ಮೇಲೆ ಧರಿಸಿದ್ದ ವಿಶಿಷ್ಟ ಹಾಗೂ ಹೈಟೆಕ್ ಸಾಧನವೊಂದು ಕ್ರೀಡಾ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇದು ಝೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ನೂತನ ತಂತ್ರಜ್ಞಾನ ಆಧಾರಿತ ‘ಟೆಂಪಲ್’ (Temple) ಎಂಬ ಎಐ ಫಿಟ್‌ನೆಸ್ ಟ್ರ್ಯಾಕಿಂಗ್ ಡಿವೈಸ್! ಮಾರುಕಟ್ಟೆಗೆ ಇನ್ನೂ ಬಿಡುಗಡೆಯಾಗದ ಈ ಗ್ಯಾಜೆಟ್ ಅನ್ನು ಈ ಹಿಂದೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಧರಿಸಿ ಪರೀಕ್ಷಿಸಿದ್ದರು.

ಹಣೆಯ ಮೇಲೆ ಕಣ್ಣಿನ ಮೇಲ್ಭಾಗದಲ್ಲಿ ಧರಿಸಲಾಗುವ ಈ ಸಾಧನವು ತೀವ್ರ ದೈಹಿಕ ಶ್ರಮದ ವೇಳೆ ಮೆದುಳಿನ ರಕ್ತಪರಿಚಲನೆ, ನರವ್ಯೂಹದ ಪ್ರತಿಕ್ರಿಯೆಗಳು ಹಾಗೂ ಮಾನಸಿಕ ಒತ್ತಡದ (Cognitive Stress) ಮಟ್ಟವನ್ನು ನಿಖರವಾಗಿ ಅಳೆಯುತ್ತದೆ ಎಂದು ಹೇಳಲಾಗಿದೆ. ಕೈಗಡಿಯಾರ ಅಥವಾ ಸ್ಮಾರ್ಟ್ ರಿಂಗ್‌ಗಳಿಗಿಂತ ಭಿನ್ನವಾದ ಈ ಡಿವೈಸ್ ಧರಿಸಿ ಗಿಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು ಭಾರೀ ಚರ್ಚೆ ಹುಟ್ಟುಹಾಕಿದೆ.

ನೆಟ್ಸ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ಅವರೊಂದಿಗೆ ಬ್ಯಾಟಿಂಗ್ ನಡೆಸುವ ಮುನ್ನ ಗಿಲ್, ಹೆಡ್ ಕೋಚ್ ಗೌತಮ್ ಗಂಭೀರ್ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ನವೆಂಬರ್ 4 ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಸಿದ್ಧತೆ ಆರಂಭವಾಗಿದ್ದು, ರೋಹಿತ್ ಶರ್ಮಾ ಈಗಾಗಲೇ ಆಕ್ಲೆಂಡ್‌ಗೆ ಬಂದಿಳಿದಿದ್ದಾರೆ, ವಿರಾಟ್ ಕೊಹ್ಲಿ ಕೂಡ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಟಿ20 ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಜೊತೆಗೆ ಮುಂಬರುವ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟುವುದು ಭಾರತದ ಗುರಿಯಾಗಿದೆ.