Home Advertisement
Home ನಮ್ಮ ಜಿಲ್ಲೆ ಬೆಂಗಳೂರು 13 ಅಂತಸ್ತು, 3 ವರ್ಷಗಳ ಗಡುವು: ರೇಷ್ಮೆ ಭವನ ನಿರ್ಮಾಣಕ್ಕೆ ಸಿಎಂ ಖಡಕ್ ಸೂಚನೆ

13 ಅಂತಸ್ತು, 3 ವರ್ಷಗಳ ಗಡುವು: ರೇಷ್ಮೆ ಭವನ ನಿರ್ಮಾಣಕ್ಕೆ ಸಿಎಂ ಖಡಕ್ ಸೂಚನೆ

0
7

ಬೆಂಗಳೂರು: ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಇ-ರೇಷ್ಮೆ ಪೋರ್ಟಲ್ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿದರು.

ರೇಷ್ಮೆ ಮೇಲೆ 1.50 ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿಸಿದ್ದು, ರೇಷ್ಮೆ ಲಾಭದಾಯಕವಾದ ಕಸುಬು. ಅದಕ್ಕಾಗಿಯೇ ಹೆಚ್ಚು ಜನ ವ್ಯವಸಾಯದ ಜೊತೆಗೆ ಉಪಕಸುಬು ಮಾಡಬೇಕು ಎಂದರು. ಕೃಷಿಯಿಂದ ವಿಮುಖರಾಗುತ್ತಿರುವ ಯುವಜನಾಂಗವನ್ನು ಪುನಃ ಸೆಳೆಯಲು ರೇಷ್ಮೆ ತೋಟಗಾರಿಕೆ, ಪಶುಸಂಗೋಪನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ಬೈವೋಲ್ಟೀನ್ ರೇಷ್ಮೆಗೆ ಬೇಡಿಕೆ: ಬೈವೋಲ್ಟೀನ್ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಸಾಗಾಣಿಕೆ ವೆಚ್ಚವನ್ನು 10 ರಿಂದ 20. ರೂ.ಗಳಿಗೆ ಹೆಚ್ಚಿಸಲಾಯಿತು ಮತ್ತು ಬೈವೋಲ್ಟೀನ್ ಬೆಳೆಯಲು ಹೆಚ್ಚಿನ ನೆರವನ್ನು ನೀಡಲು ಬದ್ಧವಾಗಿದೆ ಎಂದರು. ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಹಾಗೂ ಕಾಫಿ ಉತ್ಪಾದನೆಯಲ್ಲಿಯೂ ಮೊದಲ ಸ್ಥಾನದಲ್ಲಿದ್ದೇವೆ. ಒಂದು ದಿನಕ್ಕೆ 1 ಕೋಟಿ ಲೀ. ಹಾಲು ಹಾಲು ಉತ್ಪಾದನೆಯಲ್ಲಿ 1.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಹಾಕಲಾಗಿದೆ ಎಂದು ವಿವರಿಸಿದರು.

ಇತರೆ ಇಲಾಖೆಗಳಿಗೂ ಸ್ಥಳಾವಾಕಾಶ: ಓಕಳೀಪುರಂನಲ್ಲಿರುವ 4 ಎಕರೆ 25 ಗುಂಟೆ ವಿಸ್ತೀರ್ಣದ ಈ ಸ್ಥಳ ರೇಷ್ಮೆ ಇಲಾಖೆಗೆ ಸೇರಿದ್ದು 1995 ರಲ್ಲಿ ಇದನ್ನು ಖರೀದಿಸಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೇಷ್ಮೆ ಭವನದ ಅಗತ್ಯತೆಯನ್ನು ಮನಗಂಡು ಸ್ಥಳವನ್ನು ರೇಷ್ಮೆ ಇಲಾಖೆ ಕೊಟ್ಟರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಮೈಸೂರು ಖನಿಜ ಕಾರ್ಪೋರೇಷನ್ ವತಿಯಿಂದ ಭವನ ನಿರ್ಮಾಣ ಮಾಡುವುದು ಎಂದು ತೀರ್ಮಾನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ರೇಷ್ಮೆ ಇಲಾಖೆಯ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಿರುವಷ್ಟು ಸ್ಥಳವನ್ನು ಬಳಸಿಕೊಂಡು ಇತರೆ ಇಲಾಖೆಗಳಿಗೂ ಸ್ಥಳಾವಾಕಾಶವನ್ನು ಮಾಡಿಕೊಡುವಂತೆ ಸೂಚಿಸಲಾಗಿದೆ ಎಂದರು.

ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು: 666.75 ಕೋಟಿ ರೂ.ಗಳಿಗೆ ಟೆಂಡರ್ ಆಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಬೇಕು, 13 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಿದ್ದು ಕಟ್ಟಡ ಸದೃಢವಾಗಿರಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆದಾರರಿಗೆ ಮುಖ್ಯಮಂತ್ರಿಗಳು ಸೂಚಿಸಿದರು. ಮೂರು ವರ್ಷಗಳ ಕಾಲಮಿತಿಯಲ್ಲಿ ಕಟ್ಟಡ ಮುಗಿಯದಿದ್ದರೆ ಕ್ರಮ ನಿಮ್ಮ ವಿರುದ್ಧ ಕ್ರಮವಹಿಸಲಾಗುವುದು ಎಂದೂ ಎಚ್ಚರಿಕೆ ನೀಡಿದರು.