SK Home Ad
Home ಕ್ರೀಡೆ ಏಷ್ಯನ್ ಗೇಮ್ಸ್ – 2026: ಕರ್ನಾಟಕದ ಕ್ರೀಡಾ ಸಾಧಕರಿಗೆ ಸರ್ಕಾರದ ಮಹತ್ವದ ಕೊಡುಗೆ

ಏಷ್ಯನ್ ಗೇಮ್ಸ್ – 2026: ಕರ್ನಾಟಕದ ಕ್ರೀಡಾ ಸಾಧಕರಿಗೆ ಸರ್ಕಾರದ ಮಹತ್ವದ ಕೊಡುಗೆ

0
61

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸರ್ಕಾರದ ಮಹತ್ವದ ಘೋಷಣೆ : ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ, ಪದಕ ವಿಜೇತರಿಗೆ ಹೆಚ್ಚಿದ ಬಹುಮಾನ

ಬೆಂಗಳೂರು: ಏಷ್ಯನ್ ಗೇಮ್ಸ್-2026ರಲ್ಲಿ ದೇಶ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರ ಭರ್ಜರಿ ಪ್ರೋತ್ಸಾಹ ಘೋಷಿಸಿದೆ. ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಅರ್ಹ ರಾಜ್ಯದ ಕ್ರೀಡಾಪಟುಗಳಿಗೂ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ಪ್ರೋತ್ಸಾಹ ಧನ ನೀಡಲು ಸರ್ಕಾರ ನಿರ್ಧರಿಸಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷದಂತೆ ನಗದು ಪ್ರೋತ್ಸಾಹಧನ ನೀಡಲಾಗುತ್ತದೆ. ಅಥ್ಲೆಟಿಕ್ಸ್‌ನ ಯಶಸ್ ಪಾಲಾಕ್ಷ, ಸುಪ್ರಿಯಾ ಸಿಂಡಿಗೆರೆ ಬಸವರಾಜು, ಉನ್ನತಿ ಅಯ್ಯಪ್ಪ, ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಸಿಂಧು ಶ್ರೀ, ಬ್ಯಾಡ್ಮಿಂಟನ್‌ನ ಆಯುಷ್ ಶೆಟ್ಟಿ, ಕ್ರಿಕೆಟ್‌ನ ಶ್ರೇಯಾಂಕ ಆರ್. ಪಾಟೀಲ್, ಸೈಕ್ಲಿಂಗ್‌ನ ಕೀರ್ತಿ ರಂಗಸ್ವಾಮಿ, ಈಕ್ವೆಸ್ಟ್ರಿಯನ್‌ನ ಫವಾದ್ ಮಿರ್ಜಾ, ಗಾಲ್ಫ್‌ನ ಅದಿತಿ ಅಶೋಕ್, ಪ್ರಣವಿ ಎಸ್. ಅರಸ್, ಹಾಕಿಯ ಮೋಹಿತ್ ಹೆಚ್.ಎಸ್., ಶೂಟಿಂಗ್‌ನ ತಿಲೋತ್ತಮಾ ಸೇನ್, ಈಜಿನ ಆಕಾಶ್ ಮಣಿ, ಶ್ರೀಹರಿ ನಟರಾಜ್, ದಕ್ಷಿಣ್ ಎಸ್., ಅನೀಶ್ ಗೌಡ, ಟೇಬಲ್ ಟೆನ್ನಿಸ್‌ನ ಯಶಸ್ವಿನಿ ಘೋರ್ಪಡೆ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್‌ನ ದೀಪು ಮಲ್ಲೇಶ್ ಈ ಯೋಜನೆಯಡಿ ಲಾಭ ಪಡೆಯಲಿದ್ದಾರೆ.

ಇದರೊಂದಿಗೆ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡುತ್ತಿದ್ದ ಬಹುಮಾನ ಮೊತ್ತವನ್ನೂ ಪರಿಷ್ಕರಿಸಲಾಗಿದೆ. ಈ ಹಿಂದೆ ಚಿನ್ನದ ಪದಕಕ್ಕೆ ₹35 ಲಕ್ಷ, ಬೆಳ್ಳಿಗೆ ₹25 ಲಕ್ಷ ಹಾಗೂ ಕಂಚಿಗೆ ₹15 ಲಕ್ಷ ನೀಡಲಾಗುತ್ತಿತ್ತು. ಇದೀಗ ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹50 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತದೆ.

ಕರ್ನಾಟಕದ ಎಂಟು ಕ್ರೀಡಾಪಟುಗಳು ಈ ಪರಿಷ್ಕೃತ ಬಹುಮಾನಕ್ಕೆ ಅರ್ಹರಾಗಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಚಿನ್ನದ ಪದಕ ವಿಜೇತೆ ಶ್ರೇಯಾಂಕಾ ಆರ್. ಪಾಟೀಲ್ ಅವರಿಗೆ ₹1 ಕೋಟಿ, ಎಂ.ಆರ್. ಪೂವಮ್ಮ ಅವರಿಗೆ 4×400 ಮೀಟರ್ ಮಹಿಳಾ ರಿಲೇ ಚಿನ್ನ ಹಾಗೂ ಮಿಕ್ಸ್ಡ್ ರಿಲೇ ಬೆಳ್ಳಿ ಪದಕಕ್ಕಾಗಿ ಒಟ್ಟು ₹1.75 ಕೋಟಿ ದೊರೆಯಲಿದೆ. ಗಾಲ್ಫ್‌ನಲ್ಲಿ ವೈಯಕ್ತಿಕ ಚಿನ್ನ ಮತ್ತು ತಂಡದ ಬೆಳ್ಳಿ ಗೆದ್ದ ಪ್ರಣವಿ ಎಸ್. ಅರಸ್ ಅವರಿಗೂ ಒಟ್ಟು ₹1.75 ಕೋಟಿ ಪುರಸ್ಕಾರ ಸಿಗಲಿದೆ.

ಹಾಕಿಯ ಮೋಹಿತ್ ಹೆಚ್.ಎಸ್. ಅವರಿಗೆ ₹1 ಕೋಟಿ, ಶೂಟಿಂಗ್‌ನ ತಿಲೋತ್ತಮಾ ಸೇನ್ ಹಾಗೂ ಗಾಲ್ಫ್‌ನ ಅದಿತಿ ಅಶೋಕ್ ಅವರಿಗೆ ತಲಾ ₹75 ಲಕ್ಷ, ಬ್ಯಾಡ್ಮಿಂಟನ್‌ನ ಆಯುಷ್ ಶೆಟ್ಟಿ ಮತ್ತು ಅಥ್ಲೆಟಿಕ್ಸ್‌ನ ಸ್ನೇಹಾ ಎಸ್.ಎಸ್. ಅವರಿಗೆ ತಲಾ ₹50 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಭಾಗವಹಿಸುವಿಕೆ ಪ್ರೋತ್ಸಾಹಧನವೂ ಅನ್ವಯಿಸುತ್ತದೆ.

ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ 2% ಮೀಸಲಾತಿ : ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರದ ನೇರ ನೇಮಕಾತಿಯಲ್ಲಿ ಎಲ್ಲಾ ಹಂತಗಳಾದ ಗುಂಪು-ಎ, ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ ಕ್ರೀಡಾ ಸಾಧಕರಿಗೆ 2% ಮೀಸಲಾತಿ ಜಾರಿಗೊಳಿಸಲಾಗಿದೆ. ಅಕ್ಟೋಬರ್ 3ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಕ್ರೀಡಾ ಸಾಧನೆಗೆ ಅನುಗುಣವಾಗಿ ಅರ್ಹತಾ ಅಂಕಗಳಲ್ಲೂ ತೂಕ ನೀಡುವ ವ್ಯವಸ್ಥೆ ಇದೆ.

ಅಲ್ಲದೆ, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅರ್ಹ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ ಗುಂಪು-ಬಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

‘ಗುರಿ ಒಲಿಂಪಿಕ್ಸ್’ ಯೋಜನೆಗೆ ನಾಲ್ವರು : ಮುಂಬರುವ ಒಲಿಂಪಿಕ್ಸ್‌ಗಾಗಿ ರಾಜ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಆರ್. ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ ‘ಗುರಿ ಒಲಿಂಪಿಕ್ಸ್’ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ.

ಈ ನಾಲ್ವರು ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಪೂರ್ವ ತರಬೇತಿ ಹಾಗೂ ಸಿದ್ಧತೆಗಾಗಿ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇತ್ತೀಚಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಟ್ಟು 85 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದು, ಕರ್ನಾಟಕದ ಕ್ರೀಡಾಪಟುಗಳೂ ಹಲವು ಪ್ರಮುಖ ಪದಕಗಳಲ್ಲಿ ಕೊಡುಗೆ ನೀಡಿದ್ದಾರೆ.