ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ದಾಖಲೆಯ 11 ಬಾರಿಯ ಚಾಂಪಿಯನ್ ರೈಲ್ವೇಸ್ ತಂಡವನ್ನು ಕೇವಲ 3 ರನ್ಗಳಿಂದ ಮಣಿಸಿದ ಕರ್ನಾಟಕ ಮಹಿಳಾ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ನಾಯಕಿ ಶುಭಾ ಸತೀಶ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ (48 ರನ್) ಹಾಗೂ ಬಿ.ಜಿ. ತೇಜಸ್ವಿನಿ ಅವರ ಮಾರಕ ಬೌಲಿಂಗ್ (3/20) ನೆರವಿನಿಂದ ಕರ್ನಾಟಕ ಕೊನೆಯ ಎಸೆತದವರೆಗೂ ನಡೆದ ರೋಚಕ ಹೋರಾಟದಲ್ಲಿ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕಕ್ಕೆ ಆರಂಭದಲ್ಲೇ ವೃಂದಾ ದಿನೇಶ್ ವಿಕೆಟ್ ಕಳೆದುಕೊಂಡು ಆಘಾತ ಎದುರಾಯಿತು. ಆದರೆ ನಾಯಕಿ ಶುಭಾ ಸತೀಶ್ (48 ರನ್, 39 ಎಸೆತ, 9 ಬೌಂಡರಿ) ಹಾಗೂ ನಿಕಿ ಪ್ರಸಾದ್ (28 ರನ್, 26 ಎಸೆತ) ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದ ಕುಸಿತದ ನಡುವೆಯೂ ಶ್ರೇಯಾಂಕಾ ಪಾಟೀಲ್, ಲಾವಣ್ಯ ಚಲನ ಹಾಗೂ ಮೋನಿಕಾ ಪಟೇಲ್ ಅವರ ಉಪಯುಕ್ತ ರನ್ಗಳ ನೆರವಿನಿಂದ ಕರ್ನಾಟಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು. ರೈಲ್ವೇಸ್ ಪರ ಪೂನಂ ಯಾದವ್ 3 ಹಾಗೂ ಸ್ನೇಹ್ ರಾಣಾ 2 ವಿಕೆಟ್ ಪಡೆದರು.
ಕೊನೆಯ ಓವರ್ನ ರೋಚಕ ತಿರುವು: 150 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ರೈಲ್ವೇಸ್, 49 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಮಿನ್ನು ಮಣಿ (30 ರನ್) ಹಾಗೂ ಅರುಷಿ ಗೋಯಲ್ (41 ರನ್) 4ನೇ ವಿಕೆಟ್ಗೆ 68 ರನ್ಗಳ ಜೊತೆಯಾಟವಾಡಿ ಪಂದ್ಯವನ್ನು ರೈಲ್ವೇಸ್ ಕಡೆಗೆ ವಾಲಿಸಿದರು. ಆದರೆ 16ನೇ ಓವರ್ನಲ್ಲಿ ಮಿನ್ನು ಮಣಿ ವಿಕೆಟ್ ಕಬಳಿಸಿದ ಬಿ.ಜಿ. ತೇಜಸ್ವಿನಿ ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು. ಶ್ರೇಯಾಂಕಾ ಪಾಟೀಲ್ ಕೂಡ 2 ವಿಕೆಟ್ ಪಡೆದು ಮಿಂಚಿದರು.
ಕೊನೆಯ ಓವರ್ನಲ್ಲಿ ರೈಲ್ವೇಸ್ ಗೆಲುವಿಗೆ 18 ರನ್ಗಳ ಅಗತ್ಯವಿತ್ತು. ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಬೌಲಿಂಗ್ನಲ್ಲಿ ತನುಜಾ ಕನ್ವರ್ (18 ರನ್, 7 ಎಸೆತ) ಸ್ಫೋಟಕ ಆಟವಾಡಿ ಮೊದಲ 5 ಎಸೆತಗಳಲ್ಲಿ 14 ರನ್ ಕಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 4 ರನ್ ಬೇಕಿದ್ದಾಗ ತನುಜಾ ರನ್ಔಟ್ ಆಗುವ ಮೂಲಕ ರೈಲ್ವೇಸ್ 146/8 ರನ್ಗಳಿಗೆ ಶರಣಾಯಿತು. 2018-19ರ ಫೈನಲ್ನಲ್ಲಿ ಪಂಜಾಬ್ ವಿರುದ್ಧ 4 ರನ್ಗಳಿಂದ ಸೋತಿದ್ದ ಕರ್ನಾಟಕ, ಇದೀಗ ಚೊಚ್ಚಲ ಕಿರೀಟ ಗೆದ್ದು ಸಂಭ್ರಮಿಸಿದೆ.






















