ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: ಡಿಎ ಶೇ.2.25ರಷ್ಟು ಹೆಚ್ಚಳ ಮಾಡಿ ಸರ್ಕಾರದ ಆದೇಶ
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು (DA) ಮೂಲ ವೇತನದ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿ ಆರ್ಥಿಕ ಇಲಾಖೆ ನವೆಂಬರ್ 5ರಂದು ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ನೌಕರರ ತುಟ್ಟಿಭತ್ಯೆಯಲ್ಲಿ ಶೇ.2.25ರಷ್ಟು ಅಂಕಗಳ ಹೆಚ್ಚಳವಾಗಿದ್ದು, ಪರಿಷ್ಕೃತ ದರವು 2026ರ ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು ಈ ಕುರಿತು ಸರ್ಕಾರದ ಆದೇಶ ಸಂಖ್ಯೆ: FD 10 SRP 2026 ಹೊರಡಿಸಿದೆ. 2024ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರಿಗೆ ಈ ಪರಿಷ್ಕರಣೆ ಅನ್ವಯವಾಗಲಿದೆ. ಈ ಹಿಂದೆ ಮೂಲ ವೇತನದ ಶೇ.15.75ರಷ್ಟಿದ್ದ ತುಟ್ಟಿಭತ್ಯೆ ಇದೀಗ ಶೇ.18ಕ್ಕೆ ಏರಿಕೆಯಾಗಿದೆ.
ಜುಲೈ 1ರಿಂದಲೇ ಹೆಚ್ಚುವರಿ ಭತ್ಯೆ ಲೆಕ್ಕ : ಸರ್ಕಾರದ ಆದೇಶದ ಪ್ರಕಾರ, ತುಟ್ಟಿಭತ್ಯೆ ಹೆಚ್ಚಳವು 2026ರ ಜುಲೈ 1ರಿಂದ ಜಾರಿಗೆ ಬರಲಿದೆ. ಅಂದರೆ ನವೆಂಬರ್‌ನಲ್ಲಿ ಆದೇಶ ಹೊರಬಿದ್ದಿದ್ದರೂ, ನೌಕರರಿಗೆ ಜುಲೈ 1ರಿಂದ ಪರಿಷ್ಕೃತ ದರದ ಲೆಕ್ಕದಲ್ಲಿ ಭತ್ಯೆ ಅನ್ವಯವಾಗಲಿದೆ. ಇದರಿಂದ ಜುಲೈ ತಿಂಗಳಿಂದ ಅನ್ವಯಿಸುವ ಹೆಚ್ಚುವರಿ ತುಟ್ಟಿಭತ್ಯೆಯ ಬಾಕಿ ಮೊತ್ತದ ಲೆಕ್ಕಾಚಾರವೂ ಮಹತ್ವ ಪಡೆಯಲಿದೆ.
ಯಾರಿಗೆಲ್ಲ ಅನ್ವಯ? : ಆದೇಶದಲ್ಲಿ 2024ರ ಪರಿಷ್ಕೃತ ವೇತನ ಶ್ರೇಣಿಯ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಪರಿಷ್ಕರಣೆಯ ಜೊತೆಗೆ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ವರ್ಗಗಳಿಗೂ ಅನ್ವಯಿಸುವ ಕುರಿತು ಪ್ರತ್ಯೇಕ ನಿಬಂಧನೆಗಳನ್ನು ಉಲ್ಲೇಖಿಸಲಾಗಿದೆ.
ಯುಜಿಸಿ, ಎಐಸಿಟಿಇ ಮತ್ತು ಐಸಿಎಆರ್ ವೇತನ ಶ್ರೇಣಿಯ ನೌಕರರು ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳ ವ್ಯವಸ್ಥೆಯನ್ನೂ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ಹೆಚ್ಚಳ ಎಷ್ಟು? : ರಾಜ್ಯ ಸರ್ಕಾರವು ಮೇ 11, 2026ರಂದು ಹೊರಡಿಸಿದ್ದ ಹಿಂದಿನ ಆದೇಶದಂತೆ, ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.14.25ರಿಂದ ಶೇ.15.75ಕ್ಕೆ ಹೆಚ್ಚಿಸಿತ್ತು. ಆ ಹೆಚ್ಚಳವು 2026ರ ಜನವರಿ 1ರಿಂದ ಜಾರಿಗೆ ಬಂದಿತ್ತು. ಇದೀಗ ಮತ್ತೊಮ್ಮೆ ಶೇ.2.25ರಷ್ಟು ಹೆಚ್ಚಳ ಮಾಡಿರುವುದರಿಂದ ತುಟ್ಟಿಭತ್ಯೆ ಶೇ.18ಕ್ಕೆ ತಲುಪಿದೆ.
ಹಣದುಬ್ಬರ ಹಾಗೂ ದಿನನಿತ್ಯದ ಜೀವನ ವೆಚ್ಚದ ಏರಿಕೆಯಿಂದ ನೌಕರರ ಮೇಲೆ ಬೀಳುವ ಆರ್ಥಿಕ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ತುಟ್ಟಿಭತ್ಯೆ ಪರಿಷ್ಕರಣೆ ಮಾಡಲಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಸರ್ಕಾರ ಹೊರಡಿಸಿರುವ ಈ ಆದೇಶದಿಂದ ರಾಜ್ಯದ ಸರ್ಕಾರಿ ನೌಕರರು ಮತ್ತು ಅರ್ಹ ಪಿಂಚಣಿದಾರರಿಗೆ ಆರ್ಥಿಕ ಅನುಕೂಲವಾಗುವ ನಿರೀಕ್ಷೆಯಿದೆ.
- ಬಿಗ್ ಬಾಸ್ 13: ಜಟಾಪಟಿ ಮರೆತ ಸೌಂದರ್ಯ-ಧನುಷ್; ಕುಟುಂಬದ ಪತ್ರಕ್ಕಾಗಿ ಒಟ್ಟಿಗೆ ಅಖಾಡಕ್ಕೆ!
- ಬಿಗ್ ಬಾಸ್ 13: ಅರ್ಧರಾತ್ರಿ ಎಮೋಷನಲ್ ಟಾಸ್ಕ್; ಪತ್ರಕ್ಕಾಗಿ ಧನುಷ್-ತಾಂಡವ್ ಕಠಿಣ ಹೋರಾಟ!
- ವಿಎಫ್ಎಕ್ಸ್ ವೈಭವಕ್ಕೆ ಬಲಿಯಾಯ್ತಾ ಭಾವನೆಗಳ ಮಹಾಕಾವ್ಯ?: ರಣಬೀರ್-ಯಶ್ ಜೋಡಿಯ ‘ರಾಮಾಯಣ’ ಚಿತ್ರದ ಪ್ರಾಮಾಣಿಕ ವಿಮರ್ಶೆ ಇಲ್ಲಿದೆ!
- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.18ಕ್ಕೆ ಹೆಚ್ಚಳ
- ಮತಗಳ್ಳತನ: ಅರ್ಜಿ ನಮೂನೆ 7ರ ದುರುಪಯೋಗದ ವಿರುದ್ಧ ತನಿಖೆ




















