SK Home Ad
Home ಸುದ್ದಿ ರಾಜ್ಯ ಪುರಾತನ ವಿಗ್ರಹ ಮಾರಾಟಕ್ಕೆ ಯತ್ನ ಆರೋಪ: ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್‌ಐಆರ್

ಪುರಾತನ ವಿಗ್ರಹ ಮಾರಾಟಕ್ಕೆ ಯತ್ನ ಆರೋಪ: ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್‌ಐಆರ್

0
32

ಕುಂದಾಪುರ: ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಶ್ರೀಮಠದಲ್ಲಿ ಪುರಾತನ ವಿಗ್ರಹಗಳ ಮಾರಾಟಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದ್ದು, ಮಠದ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಮಠದ ಹಿತರಕ್ಷಣಾ ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಮಠಕ್ಕೆ ಸೇರಿದ ಸುಮಾರು 1,000 ವರ್ಷಗಳಷ್ಟು ಪುರಾತನ ಆರು ವಿಗ್ರಹಗಳ ಚಿತ್ರಗಳು ಬೆಂಗಳೂರಿನ ಆಂಟಿಕ್ ವಸ್ತುಗಳ ವ್ಯಾಪಾರ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಪ್ರಕಟವಾಗಿವೆ ಎಂದು ಸಮಿತಿ ಸದಸ್ಯ ಪ್ರೀತಮ್ ಅಡಿಗ ಆರೋಪಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ವಿಗ್ರಹಗಳ ಸುರಕ್ಷತೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ಎಫ್‌ಐಆರ್ ದಾಖಲಾದ ಬಳಿಕ ಸ್ವಾಮೀಜಿ ಹಾಗೂ ಸಿಬ್ಬಂದಿ ಮಠ ತೊರೆದಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಇದರಿಂದ ನರಸಿಂಹ ದೇವರ ನಿತ್ಯ ಪೂಜೆ ಸ್ಥಗಿತಗೊಂಡಿದೆ ಎಂದು ಸಮಿತಿ ಸದಸ್ಯ ಸುರೇಶ್ ಅಡಿಗ ತಿಳಿಸಿದ್ದಾರೆ.

ಮಠದ ಹೊರಗಿನ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಮೂವರು ಅಪರಿಚಿತರನ್ನು ಸ್ಥಳೀಯರ ಮಾಹಿತಿ ಮೇರೆಗೆ ಕೋಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಠದ ಆಡಳಿತ ಮತ್ತು ಸ್ವಾಮೀಜಿಗಳ ವಿಚಾರವಾಗಿ ವಿವಾದಗಳು ನಡೆಯುತ್ತಿವೆ. ಇದೀಗ ಪುರಾತನ ವಿಗ್ರಹಗಳ ಮಾರಾಟದ ಆರೋಪವೂ ಕೇಳಿಬಂದಿರುವುದರಿಂದ ಮಠದ ಆಸ್ತಿಪಾಸ್ತಿ ಹಾಗೂ ಧಾರ್ಮಿಕ ಪರಂಪರೆಯ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಿತ್ಯ ಪೂಜೆ ಪುನರಾರಂಭಿಸಿ ಭಕ್ತರಿಗೆ ಮಠ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದು ಹಿತರಕ್ಷಣಾ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.