SK Home Ad
Home ಸಿನಿ ಮಿಲ್ಸ್ ಕಮಲ್ ಹಾಸನ್ ಸಿನಿಪಯಣಕ್ಕೆ 67ರ ಸಂಭ್ರಮ: ವಿಶಿಷ್ಟ ಪ್ರೋಮೋ ಬಿಡುಗಡೆ!

ಕಮಲ್ ಹಾಸನ್ ಸಿನಿಪಯಣಕ್ಕೆ 67ರ ಸಂಭ್ರಮ: ವಿಶಿಷ್ಟ ಪ್ರೋಮೋ ಬಿಡುಗಡೆ!

0
44

67 ವರ್ಷಗಳ ಕಮಲ್ ಹಾಸನ್ ಸಿನಿಮಾ ಜರ್ನಿ : ಬಾಲನಟನಿಂದ ದಿಗ್ಗಜ ನಾಯಕತ್ವದವರೆಗೆ – ಕಮಲ್ ಸಿನಿಪಯಣದ ಸೆಲಬ್ರೇಷನ್

ಚೆನ್ನೈ: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್ ಅವರ ಸುದೀರ್ಘ ಸಿನಿಪಯಣಕ್ಕೆ 67ನೇ ವರ್ಷದ ಸಂಭ್ರಮದ ಗೌರವ ಸಲ್ಲಿಸಲಾಗುತ್ತಿದೆ. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (RKFI) ವಿಶೇಷ ಪ್ರೋಮೋ ಮೂಲಕ ಈ ಆಚರಣೆಗೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

RKFI ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ #67YearsOfKamalism ಅಭಿಯಾನವನ್ನು ಮುನ್ನಡೆಸಿದೆ. ‘ಒನ್ ಚೈಲ್ಡ್, ಒನ್ ಬಿಗಿನಿಂಗ್, ಒನ್ ಫಿನೋಮ್ – ಹಿಸ್ ಎರಾ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಆಕರ್ಷಕ ಮೋಟಾರ್ ಸೈಕಲ್ ದೃಶ್ಯಗಳ ಮೂಲಕ ಕಮಲ್ ಹಾಸನ್ ಅವರ ವಿಶಿಷ್ಟ ಸಿನಿ ಪಯಣವನ್ನು ಬಿಂಬಿಸಲಾಗಿದೆ.

ಬಾಲನಟನಿಂದ ಭಾರತೀಯ ಚಿತ್ರರಂಗದ ದಿಗ್ಗಜದತ್ತ : ಕಮಲ್ ಹಾಸನ್ ಅವರ ಸಿನಿಪಯಣ ಬಾಲನಟನಾಗಿ ಆರಂಭವಾಗಿ ಹಲವು ದಶಕಗಳನ್ನು ದಾಟಿದೆ. ಅಭಿನಯ ಮಾತ್ರವಲ್ಲದೆ ನಿರ್ದೇಶನ, ಚಿತ್ರಕಥೆ, ನೃತ್ಯ, ಗೀತರಚನೆ, ಗಾಯನ ಹಾಗೂ ನಿರ್ಮಾಣ ಸೇರಿದಂತೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ಭಾರತೀಯ ಸಿನಿಮಾದ ಅತ್ಯಂತ ಪ್ರಯೋಗಶೀಲ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಕಮಲ್ ಹಾಸನ್ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲಿ ಹಲವು ಪ್ರಮುಖ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ.

ಸಾಮಾಜಿಕ ಜಾಲತಾಣದಲ್ಲಿ ‘ಕಮಲಿಸಂ’ ಹವಾ : ‘67 Years of Kamalism’ ಅಭಿಯಾನ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮಲ್ ಹಾಸನ್ ಅವರ ಹಳೆಯ ಹಾಗೂ ಹೊಸ ಸಿನಿಮಾಗಳ ದೃಶ್ಯಗಳು, ಪೋಸ್ಟರ್‌ಗಳು, ಫ್ಯಾನ್ ಆರ್ಟ್ ಮತ್ತು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕಮಲ್ ಹಾಸನ್ ಅವರ ವಿಭಿನ್ನ ಪಾತ್ರಗಳ ಫೋಟೋಗಳು ಮತ್ತು ಅವರ ವೃತ್ತಿಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡಿರುವ ಪೋಸ್ಟರ್‌ಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಹಲವು ತಲೆಮಾರುಗಳ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕ ಸೆಳೆದಿರುವ ನಟನಿಗೆ ಈ ಅಭಿಯಾನದ ಮೂಲಕ ಅಭಿಮಾನಿಗಳು ಗೌರವ ಸಲ್ಲಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಮಲ್‌ ಕಮಾಲ್‌: ಕಮಲ್ ಹಾಸನ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೂ ಅಪಾರ ನಂಟಿದೆ. ಇವರು ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕೋಕಿಲ, ಬೆಂಕಿಯಲ್ಲೆ ಅರಳಿದ ಹೂವು, ತಪ್ಪಿದ ತಾಳ, ಮರಿಯಾ ಮೈ ಡಾರ್ಲಿಂಗ್ ಮತ್ತು ಮೂಕಿ ಚಿತ್ರವಾದ ಪುಷ್ಪಕ ವಿಮಾನದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸುಮಾರು 22 ವರ್ಷಗಳ ನಂತರ ಕಮಲ್ ಅವರು ರಾಮ ಶಾಮ ಭಾಮ ಚಿತ್ರದಲ್ಲಿ ಹುಬ್ಬಳ್ಳಿ-ಧಾರವಾಡ ಶೈಲಿಯ ಕನ್ನಡ ಭಾಷೆಯನ್ನು ಅದ್ಭುತವಾಗಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದರು

ನಿರ್ಮಾಪಕರಾಗಿಯೂ ಮಹತ್ವದ ಕೊಡುಗೆ : ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಹಲವು ಗಮನಾರ್ಹ ಚಿತ್ರಗಳನ್ನು ನಿರ್ಮಿಸಿದೆ. ‘ವಿಕ್ರಮ್’, ‘ಅಮರನ್’ ಸೇರಿದಂತೆ ಇತ್ತೀಚಿನ ವರ್ಷಗಳ ಪ್ರಮುಖ ಸಿನಿಮಾಗಳಲ್ಲೂ ಸಂಸ್ಥೆಯ ನಿರ್ಮಾಣದ ಛಾಪು ಕಾಣಿಸಿಕೊಂಡಿದೆ.

ಕಮಲ್ ಮಣಿರತ್ನಂ ಜೋಡಿ : ಇತ್ತೀಚಿನ ‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್ ಅವರು ನಟಿಸುವುದರ ಜತೆಗೆ ನಿರ್ಮಾಪಕರಾಗಿಯೂ ಭಾಗಿಯಾಗಿದ್ದರು. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ನೀಡಿದ್ದು, ಕಮಲ್ ಹಾಸನ್ ಮತ್ತು ಮಣಿರತ್ನಂ ಹಲವು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದರು.

ಮುಂದಿನ ದಿನಗಳಲ್ಲಿಯೂ RKFI ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರಜನಿಕಾಂತ್ ಅಭಿನಯದ ಮುಂದಿನ ಚಿತ್ರವೊಂದನ್ನೂ ಸಂಸ್ಥೆ ನಿರ್ಮಿಸುತ್ತಿದ್ದು, ಈ ಯೋಜನೆಗೆ ಸಿಬಿ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಮಾತ್ರವಲ್ಲ, ರಾಜಕೀಯದಲ್ಲೂ ಸಕ್ರಿಯ : ಕಮಲ್ ಹಾಸನ್ ಅವರ ಸಿನಿಪಯಣದ ಸಂಭ್ರಮದ ನಡುವೆ ಅವರ ಇತ್ತೀಚಿನ ಸಾರ್ವಜನಿಕ ಹಾಗೂ ರಾಜಕೀಯ ಚಟುವಟಿಕೆಗಳೂ ಅಭಿಮಾನಿಗಳ ಚರ್ಚೆಯ ಭಾಗವಾಗಿವೆ. ಮಕ್ಕಳ್ ನೀಧಿ ಮೈಯಂ (MNM) ಮೂಲಕ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿರುವ ಕಮಲ್ ಹಾಸನ್, ಸಿನಿಮಾ ಮತ್ತು ಸಾರ್ವಜನಿಕ ಜೀವನ ಎರಡರಲ್ಲೂ ಸಕ್ರಿಯರಾಗಿದ್ದಾರೆ.

ಇತ್ತೀಚಿನ ಅಮೆರಿಕ ಪ್ರವಾಸ ಹಾಗೂ ಸಾರ್ವಜನಿಕ ಚಟುವಟಿಕೆಗಳ ಕುರಿತ ಅಪ್‌ಡೇಟ್‌ಗಳ ನಡುವೆಯೇ ‘67 Years of Kamalism’ ಅಭಿಯಾನ ಆರಂಭವಾಗಿರುವುದು ಅವರ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ತಲೆಮಾರುಗಳನ್ನು ದಾಟಿದ ‘ಕಮಲಿಸಂ’ : ಕಮಲ್ ಹಾಸನ್ ಅವರ ವಿಶೇಷತೆ ಕೇವಲ ಅವರು ನಟಿಸಿರುವ ಸಿನಿಮಾಗಳ ಸಂಖ್ಯೆಯಲ್ಲಿ ಮಾತ್ರವಲ್ಲ. ಪ್ರತಿ ಹಂತದಲ್ಲೂ ಹೊಸ ರೀತಿಯ ಪಾತ್ರಗಳು, ವಿಭಿನ್ನ ಕಥಾಹಂದರಗಳು ಮತ್ತು ತಾಂತ್ರಿಕ ಪ್ರಯೋಗಗಳ ಮೂಲಕ ತಮ್ಮನ್ನು ತಾವು ಮರುರೂಪಿಸಿಕೊಂಡಿರುವುದು ಅವರ ಸಿನಿಪಯಣದ ಪ್ರಮುಖ ಅಂಶವಾಗಿದೆ.

ಹೀಗಾಗಿ ‘67 Years of Kamalism’ ಎಂಬ ಆಚರಣೆ ಕೇವಲ ಒಂದು ನಟನ ವೃತ್ತಿಜೀವನದ ಮೈಲಿಗಲ್ಲಿನ ಸಂಭ್ರಮವಾಗದೆ, ಭಾರತೀಯ ಸಿನಿಮಾದಲ್ಲಿ ಕಮಲ್ ಹಾಸನ್ ಬೀರಿದ ದೀರ್ಘಕಾಲದ ಪ್ರಭಾವವನ್ನು ನೆನಪಿಸುವ ಸಂದರ್ಭವಾಗಿಯೂ ಕಾಣಿಸಿಕೊಂಡಿದೆ.

ಸದ್ಯ #67YearsOfKamalism ಹ್ಯಾಶ್‌ಟ್ಯಾಗ್ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವಿವಿಧ ಪಾತ್ರಗಳು ಮತ್ತು ಸಿನಿಮಾಗಳ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮಲ್ ಹಾಸನ್ ಅವರ ಸಿನಿಪಯಣ ಮತ್ತೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.