ಮತದಾರರ ಪಟ್ಟಿ ವಿವಾದ: ಪ್ರಕಾಶ್ ರಾಜ್ ಆರೋಪಕ್ಕೆ ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು: ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿಲ್ಲ. ಅವರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ವಿಳಾಸದಲ್ಲಿ ಪ್ರಸ್ತುತ ವಾಸವಾಗಿಲ್ಲದ ಹಿನ್ನೆಲೆಯಲ್ಲಿ ಚುನಾವಣಾ ನಿಯಮಾವಳಿಗಳ ಪ್ರಕಾರ ಅವರ ಹೆಸರನ್ನು ‘ಸ್ಥಳಾಂತರಗೊಂಡಿದ್ದಾರೆ (Shifted)’ ಎಂದು ಗುರುತಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರಪಾಲಿಕೆಯ ಆಯುಕ್ತ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ ಜಿ. ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ಐಆರ್ (Special Intensive Revision) ಪ್ರಕ್ರಿಯೆ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆರೋಪಿಸಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಚುನಾವಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ವಿವರಿಸಿದ್ದಾರೆ.
ಚುನಾವಣಾಧಿಕಾರಿಗಳ ಪ್ರಕಾರ, ಪ್ರಕಾಶ್ ರಾಜ್ ಅವರ ಹೆಸರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1ರ ಕ್ರಮ ಸಂಖ್ಯೆ 970ರಲ್ಲಿ 16 ಜೂನ್ 2026ರ ವೇಳೆಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿತ್ತು. ಎಸ್‌ಐಆರ್ ಚಟುವಟಿಕೆಗಳಿಗಾಗಿ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಿದ ದಿನಾಂಕದವರೆಗೂ ಅವರ ಹೆಸರು ಪಟ್ಟಿಯಲ್ಲಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ-ಮನೆ ಪರಿಶೀಲನೆ ವೇಳೆ ಮಾಹಿತಿ : ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿ (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಕಾಶ್ ರಾಜ್ ಅವರು ಮತದಾರರ ಪಟ್ಟಿಯಲ್ಲಿ ನೀಡಿದ್ದ ಫ್ಲಾಟ್ ಸಂಖ್ಯೆ 266, ಗಾರ್ಡನ್ ಅಪಾರ್ಟ್‌ಮೆಂಟ್, ವಿಠಲ್ ಮಲ್ಯ ರಸ್ತೆ, ಬೆಂಗಳೂರು-01 ವಿಳಾಸದಲ್ಲಿ ಅವರು ಪ್ರಸ್ತುತ ವಾಸವಿಲ್ಲದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಅಪಾರ್ಟ್‌ಮೆಂಟ್ ಮಾಲೀಕರನ್ನು ದೂರವಾಣಿ ಮೂಲಕ ವಿಚಾರಿಸಿದಾಗ, ಪ್ರಕಾಶ್ ರಾಜ್ ಅವರು ಸುಮಾರು ನಾಲ್ಕು ವರ್ಷಗಳಿಂದ ಆ ವಿಳಾಸದಲ್ಲಿ ವಾಸಿಸುತ್ತಿಲ್ಲ ಹಾಗೂ ಸದ್ಯ ಅಲ್ಲಿ ಬೇರೆ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, BLO ಅವರು ಅಪಾರ್ಟ್‌ಮೆಂಟ್‌ನ ನೆರೆಹೊರೆಯವರು ಹಾಗೂ ವ್ಯವಸ್ಥಾಪಕರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಈ ಹೇಳಿಕೆಗಳ ಆಧಾರದ ಮೇಲೆ ‘ಮಹಜರ್’ ಸಿದ್ಧಪಡಿಸಿ, ಚುನಾವಣಾ ಆಯೋಗದ ಕಾನೂನು ಮತ್ತು ಮಾರ್ಗಸೂಚಿಗಳ ಪ್ರಕಾರ ಪ್ರಕಾಶ್ ರಾಜ್ ಅವರ ಹೆಸರನ್ನು ‘Shifted’ ಎಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಆಸ್ತಿ ವ್ಯವಸ್ಥಾಪಕರಿಂದಲೂ ಮಾಹಿತಿ ದೃಢೀಕರಣ : ಆಗಸ್ಟ್ 11ರಂದು ಸಂಜೆ ಸುಮಾರು 5.30ರ ವೇಳೆಗೆ ಅಪಾರ್ಟ್‌ಮೆಂಟ್‌ನ ಆಸ್ತಿ ವ್ಯವಸ್ಥಾಪಕರು ದೂರವಾಣಿ ಮೂಲಕ ಪ್ರಕಾಶ್ ರಾಜ್ ಬೇರೆಡೆಗೆ ಸ್ಥಳಾಂತರಗೊಂಡಿರುವುದನ್ನು ಖಚಿತಪಡಿಸಿದ್ದಾರೆ ಎಂದು ಚುನಾವಣಾಧಿಕಾರಿಗಳ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳು ವಾಸ್ತವಾಂಶ ಪರಿಶೀಲಿಸಿದ ಬಳಿಕ ಪ್ರಕಾಶ್ ರಾಜ್ ಅವರೊಂದಿಗೂ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಅವರು ತಾವು ನೋಂದಾಯಿತ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದು, ಆದರೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಮತ್ತೊಂದು ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಜಗದೀಶ್ ಹೇಳಿದ್ದಾರೆ.
ಹೊಸ ವಿಳಾಸದಲ್ಲಿ ಮತದಾರರಾಗಿ ನೋಂದಣಿಗೆ ಅವಕಾಶ : ನೋಂದಾಯಿತ ವಿಳಾಸದಿಂದ ಬೇರೆಡೆ ವಾಸವಾಗಿರುವ ಮತದಾರರು ಪ್ರಸ್ತುತ ವಾಸಿಸುವ ವಿಳಾಸದ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯ ಮೂಲಕ ಫಾರ್ಮ್-6 ಸಲ್ಲಿಸಬಹುದು. ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಈ ಅರ್ಜಿಯ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಾಶ್ ರಾಜ್ ಅವರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೀಗಾಗಿ, ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸರಿಯಲ್ಲ. ಅವರು ನೀಡಿದ್ದ ವಿಳಾಸದಲ್ಲಿ ವಾಸವಿಲ್ಲದ ಹಿನ್ನೆಲೆಯಲ್ಲಿ ನಿಯಮಾನುಸಾರ ‘ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದೆ ಎಂಬುದು ಚುನಾವಣಾಧಿಕಾರಿಗಳ ಸ್ಪಷ್ಟನೆಯಾಗಿದೆ.
‘65 ಲಕ್ಷ ಮತದಾರರಲ್ಲಿ ನಾನೂ ಒಬ್ಬ’ ಎಂದಿದ್ದ ಪ್ರಕಾಶ್ ರಾಜ್ : ಇದಕ್ಕೂ ಮುನ್ನ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ಎಸ್‌ಐಆರ್ ಪ್ರಕ್ರಿಯೆ ಬಳಿಕ ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿದ್ದರು.
ವಿಡಿಯೋದಲ್ಲಿ ಅವರು, ಎಸ್‌ಐಆರ್ ಬಳಿಕ ಬೆಂಗಳೂರಿನಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ತಾನೂ ಒಬ್ಬ ಎಂದು ವ್ಯಂಗ್ಯವಾಗಿ ಹೇಳಿದ್ದರು. ತಾನು ಇದೇ ಕ್ಷೇತ್ರದಲ್ಲಿ ಹುಟ್ಟಿ, ಬೆಳೆದು, ಶಾಲೆ-ಕಾಲೇಜು ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದ ಅವರು, ಇದೇ ಕ್ಷೇತ್ರದಿಂದ ಲೋಕಸಭಾ ಚುನಾವಣೆಯನ್ನೂ ಎದುರಿಸಿದ್ದಾಗಿ ಉಲ್ಲೇಖಿಸಿದ್ದರು.
ಪ್ರಕಾಶ್ ರಾಜ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ದಾಖಲೆಗಳು ಹಾಗೂ ಸ್ಥಳೀಯ ಪರಿಶೀಲನೆಯ ಆಧಾರದ ಮೇಲೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟಿನಲ್ಲಿ, ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿಲ್ಲ, ನೋಂದಾಯಿತ ವಿಳಾಸದಲ್ಲಿ ವಾಸವಿಲ್ಲದ ಕಾರಣ ‘Shifted’ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.




















