SK Home Ad
Home ಸುದ್ದಿ ರಾಜ್ಯ ರೈತರ ಹಿತರಕ್ಷಣೆಗೆ ಸೂಕ್ತ ನಿರ್ಣಯ ಅಂಗೀಕಾರ: ಸಿಎಂ ಭರವಸೆ

ರೈತರ ಹಿತರಕ್ಷಣೆಗೆ ಸೂಕ್ತ ನಿರ್ಣಯ ಅಂಗೀಕಾರ: ಸಿಎಂ ಭರವಸೆ

0
24

ಸಕಲೇಶಪುರ: “ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಕೆ. ಕಸ್ತೂರಿರಂಗನ್ ಸಮಿತಿ ವರದಿ ಬಗ್ಗೆ ಚರ್ಚಿಸಲು ಕರೆದಿರುವ ವಿಶೇಷ ಅಧಿವೇಶನದಲ್ಲಿ ರೈತರಿಗೆ ಧಕ್ಕೆಯಾಗದಂತೆ ಸೂಕ್ತ ನಿರ್ಣಯ ಅಂಗೀಕರಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಸಕಲೇಶಪುರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಅವರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

“ಕಳೆದ ಎರಡು ದಿನಗಳಿಂದ ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಇಂದು ಸಕಲೇಶಪುರಕ್ಕೆ ಭೇಟಿ ನೀಡಿದ್ದೇನೆ. ಕಸ್ತೂರಿರಂಗನ್ ವರದಿಯಿಂದಾಗಿ ಈ ಭಾಗದ ಜನರಲ್ಲಿ ತೀವ್ರ ಕಳವಳವಿದೆ. ಈ ಹಿಂದೆ ನಮ್ಮ ಸರ್ಕಾರ ಈ ವರದಿಯನ್ನು ತಿರಸ್ಕರಿಸಿದ್ದರೂ, ಇದೀಗ ಈ ತಿಂಗಳ 27ರ ಒಳಗೆ ಕೇಂದ್ರಕ್ಕೆ ನಮ್ಮ ಅಭಿಪ್ರಾಯ ಕಳುಹಿಸಬೇಕಾಗಿದೆ” ಎಂದರು.

ವಿಶೇಷ ಅಧಿವೇಶನ: “ವಿಪಕ್ಷಗಳು ಅಧಿವೇಶನದಲ್ಲಿ ಬರ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸದ ಹಿನ್ನೆಲೆಯಲ್ಲಿ, ರೈತರ ಬೇಡಿಕೆಗಳನ್ನು ಆಲಿಸಲು ಮತ್ತು ಸೂಕ್ತ ಅಭಿಪ್ರಾಯ ರೂಪಿಸಲು ಹಾಗೂ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ” ಎಂದರು.

ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧ: “ಶಾಸನಸಭೆಯಲ್ಲಿ ಚರ್ಚಿಸುವ ಮುನ್ನ ಪ್ರತಿಯೊಂದು ಬಾಧಿತ ತಾಲೂಕಿಗೂ ಭೇಟಿ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ 4 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಇನ್ನೆರಡು ಜಿಲ್ಲೆಗಳಿಗೆ ಭೇಟಿ ನೀಡಬೇಕಿದೆ. ರೈತರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದ್ದು, ಅವರೂ ಮುಕ್ತವಾಗಿ ಅಭಿಪ್ರಾಯಗಳನ್ನು ನೀಡಿದ್ದಾರೆ. ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ” ಎಂದರು.