SK Home Ad
Home ಸುದ್ದಿ ರಾಜ್ಯ ನದಿ ತಿರುವು ಯೋಜನೆ ಕೈಬಿಡಲು 15 ದಿನಗಳ ಗಡುವು

ನದಿ ತಿರುವು ಯೋಜನೆ ಕೈಬಿಡಲು 15 ದಿನಗಳ ಗಡುವು

0
7

ಉತ್ತರ ಕನ್ನಡ (ಯಲ್ಲಾಪುರ): ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಮಾರಕವಾದ ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಮಂಗಳವಾರ ಯಲ್ಲಾಪುರ ಪಟ್ಟಣ ಅಭೂತಪೂರ್ವ ಪ್ರತಿಭಟನೆಗೆ ಸಾಕ್ಷಿಯಾಯಿತು.

ಜಿಲ್ಲೆಯ ಮೂಲೆಮೂಲೆಗಳಿಂದ ಬಂದ ಸಾವಿರಾರು ಜನರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಯೋಜನೆ ಕೈಬಿಡುವ ಕುರಿತು ಸರ್ಕಾರ 15 ದಿನದೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಸ್ತೆ ತಡೆ ಸಂಚಾಲನಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಅಂಗವಾಗಿ ಪಟ್ಟಣದ ಟಿಎಂಎಸ್ ಸೂಪರ್ ಮಾರ್ಕೆಟ್ ಎದುರು ಸಭೆ ನಡೆಯಿತು.

ಟಿಎಂಎಸ್‌ನಿಂದ ಅಂಬೇಡ್ಕರ್ ವೃತ್ತ, ಪೊಲೀಸ್ ಠಾಣೆ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮೆರವಣಿಗೆ ಸಾಗಿತು. ಹೋರಾಟಕ್ಕೆ ಬೆಂಬಲ ಸೂಚಿಸಿ ಯಲ್ಲಾಪುರ ಪಟ್ಟಣದ ಔಷಧ ಅಂಗಡಿಗಳು ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಪಟ್ಟಣದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮೆರವಣಿಗೆಯ ಮಾರ್ಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಶಿವಾಜಿ ವೃತ್ತದ ಬಳಿ ನಡೆದ ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, 80ರ ದಶಕದಿಂದಲೂ ಈ ಯೋಜನೆಯ ಮೇಲೆ ಸರ್ಕಾರದ ಕಣ್ಣಿದೆ. ಉತ್ತರಕನ್ನಡದ ಧಾರಣಾ ಶಕ್ತಿಯ ಮೇಲೆ ಅಧ್ಯಯನ ಆಗಬೇಕಿದೆ. ಯಾವುದೇ ಬೃಹತ್ ಯೋಜನೆಗಳು ಉತ್ತರಕನ್ನಡದ ಮೇಲೆ ಬರದಂತೆ ತೀರ್ಮಾನ ಕೈಗೊಳ್ಳಬೇಕು. ಈಗಾಗಲೇ ನಾವು ಜನಪ್ರತಿನಿಧಿಗಳ ನಿಯೋಗ ಕೇಂದ್ರ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಗಳ ಮುಂದೆ ನಮ್ಮ ಜಿಲ್ಲೆಯ ಅಗತ್ಯತೆಗಳ ಕುರಿತು ತಿಳಿಸಿದ್ದೇವೆ. ಮುಂದೆಯೂ ಸಹ ಇದರ ಮನವರಿಕೆ ಮಾಡಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಜನರ ವಿರುದ್ಧದ ಯಾವುದೇ ಕಾರ್ಯಗಳು, ಯೋಜನೆಯನ್ನು ನಾನು ಬೆಂಬಲಿಸುವುದಿಲ್ಲ. ಯಾವುದೇ ಮುಲಾಜಿಲ್ಲದೆ, ನಮ್ಮ ರಾಜಕೀಯ ಶಕ್ತಿಯನ್ನು ಉಪಯೋಗಿಸಿ ಇದನ್ನು ತಡೆಯಲು ಪ್ರಯತ್ನಿಸುತ್ತೇವೆ. ಇದಕ್ಕೆ ತಾರ್ಕಿಕ ಅಂತ್ಯವನ್ನು ಹಾಡುವ ಅಗತ್ಯವಿದೆ. ಕೇವಲ ಹೋರಾಟವಲ್ಲದೇ, ಕಾನೂನಾತ್ಮಕ ಹೋರಾಟವನ್ನು ನಾವು ಮಾಡಬೇಕಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಇದು ಬಹಳ ಮಹತ್ವದ ಹೋರಾಟವಾಗಿದೆ. ಮಳೆ ಬಂದರೆ ಮಾತ್ರ ನದಿಯಲ್ಲಿ ನೀರು ಎನ್ನುವ ಪರಿಸ್ಥಿತಿ ಎದುರಾಗಿರುವಾಗ, ಸಾವಿರಾರು ಕೋಟಿಯ ಯೋಜನೆ ಯಾವುದೇ ಜಸ್ಟೀಸ್ ಮಾಡುವುದಿಲ್ಲ. ಈ ಕುರಿತು ಸಂಸದರ ನೇತೃತ್ವದಲ್ಲಿ ನಿರ್ಣಾಯಕ ನಿರ್ಧಾರ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದರು.

ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಗೆ ಮಾರಕವಾದ ಯಾವುದೇ ಯೋಜನೆ ಬಂದರೂ ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ. ಈ ಬಾರಿಯ ಅಧಿವೇಶನದಲ್ಲಿ ನಮ್ಮ ಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸೋಣ ಎಂದರು.

ಸರ್ಕಾರಕ್ಕೆ ಸಲ್ಲಿಸಲಾದ ಮನವಿಯನ್ನು ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲೀಪ್ ಶಶಿ, ಎ.ಸಿ. ಚಂದ್ರಶೇಖರ್ ಅವರು ಸ್ವೀಕರಿಸಿ, ಸರ್ಕಾರಕ್ಕೆ ಹೋರಾಟದ ಉದ್ದೇಶಗಳ ಕುರಿತು ವಿವರವಾದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಒಕ್ಕೊರಲಿನ ಒತ್ತಾಯ: ಹೋರಾಟದ ಬಳಿಕ ನಡೆದ ಸಮಿತಿಯ ನಿರ್ಣಯದಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಮುಂದಿನ 15 ದಿನಗಳಲ್ಲಿ ಯೋಜನೆ ತಡೆಗಟ್ಟುವ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಈ ಅವಧಿಯಲ್ಲಿ ನಿರ್ಧಾರ ಹೊರಬರದಿದ್ದರೆ ರಾಜ್ಯ ಮತ್ತು ಕೇಂದ್ರದ ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದು ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರದಂತಹ ಕಠಿಣ ಕ್ರಮಗಳನ್ನು ಪರಿಗಣಿಸುವ ಎಚ್ಚರಿಕೆ ನೀಡಲಾಯಿತು.

18.5 ಅಲ್ಲ 5 ಟಿಎಂಸಿ ನೀರು ಸಹ ದೊರಕಲಾರದು: ಬೇಡ್ತಿ-ಅಘನಾಶಿನಿ ವರದಾ ನದಿ ತಿರುವು ಯೋಜನೆಯಿಂದ ಸರ್ಕಾರದ ಯೋಜನೆಯ ಪ್ರಕಾರ ದೊರಕುವ 18.5 ಟಿಎಂಸಿ ನೀರಿನಲ್ಲಿ 5 ಟಿಎಂಸಿ ನೀರು ಸಹ ದೊರಕುವುದಿಲ್ಲ. ಪರಿಸರ ತಜ್ಞ ವಿ.ಆರ್. ಹೆಗಡೆ ಅವರು ವೈಜ್ಞಾನಿಕವಾಗಿ ಮಾಹಿತಿ ಕಲೆಹಾಕಿ, ಬೇಡ್ತಿ ಕಣಿವೆಯಲ್ಲಿ ಬೀಳುವ ಬಹುತೇಕ ಪಾಲಿನ ಮಳೆ ನದಿಗೆ ತಲುಪುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಪರಿಸರ ಹೋರಾಟಗಾರ ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ನದಿಗಳು ಸಮುದ್ರವನ್ನು ಸೇರಲೇಬೇಕು ಎನ್ನುವುದು ಪ್ರಕೃತಿಯ ನಿಯಮ. ಅದನ್ನರಿಯದ ರಾಜಕಾರಣಿಗಳು ಹಾಗೂ ನಿಷ್ಪ್ರಯೋಜಕ ಆರ್ಥಿಕ ತಜ್ಞರು ಇಂತಹ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹೋರಾಟ ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ, ಮಾತನಾಡಿ, ಒಂದೂವರೆ ವರ್ಷದಿಂದಲೂ ಸರ್ಕಾರ ನಮ್ಮ ಒಕ್ಕೊರಲಿನ ಆಗ್ರಹಕ್ಕೆ ಮಣಿಯುತ್ತಿಲ್ಲ. ಮುಂದೆ ನಮ್ಮ ಜಿಲ್ಲೆಯನ್ನೇ ಉಳಿಸಿಕೊಳ್ಳುವ ಅವಶ್ಯಕತೆ ಬಂದರೂ ಬರಬಹುದು. ನಮ್ಮಲ್ಲಿಯೇ ನೀರಿಲ್ಲದಿದ್ದಾಗ ಬಯಲುಸೀಮೆಗೆ ನೀರು ಹರಿಸುವ ಪ್ರಯತ್ನಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದರು.

ಮಾಜಿ ಎಂಎಲ್‌ಸಿ ಶಾಂತಾರಾಮ ಸಿದ್ದಿ, ಬೇಡ್ತಿ ಅಘನಾಶಿನಿ ಕೊಳ್ಳ ಸಮಿತಿ ಅಧ್ಯಕ್ಷ ಅನಂತ್ ಆಶೀಸರ, ಪ್ರಧಾನ ಸಂಚಾಲಕ ಹರಿಪ್ರಕಾಶ್ ಕೋಣೆಮನೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು