SK Home Ad
Home ಸುದ್ದಿ ರಾಜ್ಯ ನ. 13ರಂದು ಮೆಟ್ರೋ ಪಿಂಕ್‌ಲೈನ್‌ಗೆ ಪ್ರಧಾನಿ ಮೋದಿ ಚಾಲನೆ

ನ. 13ರಂದು ಮೆಟ್ರೋ ಪಿಂಕ್‌ಲೈನ್‌ಗೆ ಪ್ರಧಾನಿ ಮೋದಿ ಚಾಲನೆ

0
55

ಹುಬ್ಬಳ್ಳಿ: ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರ ಬಹುದಿನಗಳ ನಿರೀಕ್ಷೆಯಾಗಿರುವ ನಮ್ಮ ಮೆಟ್ರೋದ ಪಿಂಕ್ ಲೈನ್‌ಗೆ ನ. 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಉದ್ಘಾಟನೆ ನೆರವೇರಿಸಿ, ಐಐಎಂ ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲೇ ಪ್ರಯಾಣಿಸಲಿದ್ದಾರೆ ಎಂದು ಹೇಳಿದರು.

ನೂತನ ಪಿಂಕ್‌ಲೈನ್ ಮಾರ್ಗದಿಂದ ಬೆಂಗಳೂರು ಮೆಟ್ರೋ ಜಾಲ 103 ಕಿ.ಮೀ.ಗೆ ವಿಸ್ತರಣೆಯಾಗಲಿದ್ದು, ದೆಹಲಿ ಬಳಿಕ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾಗಲಿದೆ ಎಂದರು.

ಪ್ರಧಾನಿ ಮೋದಿ ಅವರು ಅಂದು ಬೆಳಗ್ಗೆ ಪ್ರಶಾಂತಿ ಕುಟೀರದ ಕಾರ್ಯಕ್ರಮದ ಬಳಿಕ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ. ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಸ್ಥಳದ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರ ಅಂತಿಮಗೊಳಿಸಲಾಗುವುದು ಎಂದರು.

2014ರಲ್ಲಿ ಬೆಂಗಳೂರಿನಲ್ಲಿ ಕೇವಲ 7 ಕಿ.ಮೀ. ಮೆಟ್ರೋ ಜಾಲವಿತ್ತು. ಇದೀಗ 12 ವರ್ಷಗಳಲ್ಲಿ ಅದು 103 ಕಿ.ಮೀ.ಗೆ ವಿಸ್ತರಣೆಯಾಗಿದೆ. ಪಿಂಕ್‌ಲೈನ್‌ನ ಆರು ನಿಲ್ದಾಣಗಳ ಪೈಕಿ ಬಹುತೇಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿವೆ. ಕಳೆದ ವರ್ಷ ಯೆಲ್ಲೋ ಲೈನ್ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ, ಇದೀಗ ಮತ್ತೊಮ್ಮೆ ನಮ್ಮ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ಪಿಂಕ್ ಲೈನ್ ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಬೆಂಗಳೂರು-ಮುಂಬೈ ನಡುವೆ ಯಾದಗಿರಿ, ಕಲಬುರಗಿ ಮಾರ್ಗವಾಗಿ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ರೈಲು ಆರಂಭಿಸುವ ಭರವಸೆಯನ್ನೂ ನೀಡಿದ್ದಾರೆ. ಮುಂದಿನ ಹಂತದಲ್ಲಿ ಬೆಂಗಳೂರು-ಪುಣೆ ಬುಲೆಟ್ ರೈಲು ಕಾರಿಡಾರ್ ಅನ್ನು ಹುಬ್ಬಳ್ಳಿ ಮಾರ್ಗವಾಗಿ ಕಲ್ಪಿಸುವ ಪ್ರಸ್ತಾಪವೂ ಇದೆ ಎಂದರು.