SK Home Ad
Home ಸುದ್ದಿ ರಾಜ್ಯ ಬಸ್ ಟಿಕೆಟ್ ದರ ಇಂದು 15-20% ಏರಿಕೆ ಸಾಧ್ಯತೆ

ಬಸ್ ಟಿಕೆಟ್ ದರ ಇಂದು 15-20% ಏರಿಕೆ ಸಾಧ್ಯತೆ

0
183
(File Photo)

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಚರ್ಚೆ ನಡೆಯಲಿದ್ದು, ನ.5ರಿಂದಲೇ ಪರಿಷ್ಕೃತ ದರ ಜಾರಿಗೆ ಬರುವ ಸಾಧ್ಯತೆ ಇದೆ.

ಪ್ರಯಾಣ ದರ ಹೆಚ್ಚಳದ ಪ್ರಮಾಣ ಅಂತಿಮಗೊಳಿಸಲು ಸಾರಿಗೆ ನಿಗಮಗಳ ಉನ್ನತಾಧಿಕಾರಿಗಳು ಇಂದು ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಲಿದ್ದಾರೆ. ಬಳಿಕ ಸಾರಿಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಪ್ರಯಾಣ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ದರ ಹೆಚ್ಚಳಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಾರಿಗೆ ಸಚಿವರಿಗೆ ವಹಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದರ ಏರಿಕೆಯ ಕಸರತ್ತು ಚುರುಕುಗೊಂಡಿದೆ. ಸಾರ್ವಜನಿಕ ಸಾರಿಗೆ ಪ್ರಯಾಣ ದರ ನಿಯಂತ್ರಣ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಬಿಎಂಟಿಸಿ ಪ್ರಯಾಣ ದರವನ್ನು ಶೇ.40ರಿಂದ 45ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ.

ಉಳಿದ ಮೂರು ಸಾರಿಗೆ ನಿಗಮಗಳ ದರವನ್ನು ಶೇ.25ರಿಂದ 28ರಷ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಆದರೆ, ಈ ಪ್ರಮಾಣದ ಏರಿಕೆಗೆ ಸರ್ಕಾರ ಒಲವು ತೋರಿಲ್ಲ ಎನ್ನಲಾಗಿದೆ. ಬದಲಾಗಿ ಶೇ.15ರಿಂದ 20ರಷ್ಟು ದರ ಹೆಚ್ಚಳಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.