SK Home Ad
Home ಸುದ್ದಿ ರಾಜ್ಯ ದಿನವಿಡೀ ಸಂಧಾನ ನಡೆಸಿದರೂ ಮುಂದುವರಿದ ಕಬ್ಬಿನ ದರ ಬಿಕ್ಕಟ್ಟು

ದಿನವಿಡೀ ಸಂಧಾನ ನಡೆಸಿದರೂ ಮುಂದುವರಿದ ಕಬ್ಬಿನ ದರ ಬಿಕ್ಕಟ್ಟು

0
3

ವಿಲಾಸ ಜೋಶಿ
ಬೆಳಗಾವಿ: ಕಬ್ಬಿನ ದರ ನಿಗದಿಗಾಗಿ ಬೆಳಗ್ಗಿನಿಂದ ರಾತ್ರಿವರೆಗೆ ನಡೆದ ಮೂರು ಸುತ್ತಿನ ಮಾತುಕತೆಯಲ್ಲೂ ಒಮ್ಮತ ಮೂಡಲಿಲ್ಲ. ಪ್ರತಿ ಟನ್‌ಗೆ ಮೊದಲ ಕಂತಾಗಿ 3,500 ನೀಡಿ, ಉಳಿದ ಹಣವನ್ನು ಸಕ್ಕರೆ ಬೆಲೆಗೆ ಅನುಗುಣವಾಗಿ ಪಾವತಿಸುವ ಪ್ರಸ್ತಾವಕ್ಕೆ ರೈತರು ಒಪ್ಪದ ಕಾರಣ ಮಂಗಳವಾರದ ಸಂಧಾನ ನಿರ್ಧಾರವಿಲ್ಲದೆ ಅಂತ್ಯಗೊಂಡಿತು.

ಮೊದಲ ಕಂತಿನ ಮೊತ್ತ ಹೆಚ್ಚಿಸಬೇಕು. ನಂತರ ನೀಡುವ ಹಣ ಎಷ್ಟು, ಅದನ್ನು ಯಾವಾಗ ಪಾವತಿಸಲಾಗುತ್ತದೆ ಎಂಬುದನ್ನೂ ಖಚಿತಪಡಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಸಚಿವರು ನಾಳೆ ನಮ್ಮ ಪಾದಯಾತ್ರೆ ಆರಂಭವಾಗುವ ಸ್ಥಳಕ್ಕೆ ಬಂದು ಎಲ್ಲ ರೈತರ ಸಮ್ಮುಖದಲ್ಲಿ ನಿರ್ಧಾರವನ್ನು ಸ್ಪಷ್ಟಪಡಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಪಡಸಲಗಿ ಮುಂತಾದವರು ನಡೆಸಿದ ಗೌಪ್ಯ ಮಾತುಕತೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಭೆ ಹಾಗೂ ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯ್ದ ಮುಖಂಡರೊಂದಿಗೆ ನಡೆದ ಸಂಧಾನದಲ್ಲೂ ದರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಮೊದಲ ಕಂತು ಹೆಚ್ಚಿಸಲು ಪಟ್ಟು: ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಬೆಳೆಗಾರರು ಕಬ್ಬಿನ ದರ ಮತ್ತು ಪಾವತಿ ವ್ಯವಸ್ಥೆಯ ಕುರಿತು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಮುಂಗಡವಾಗಿ 3,500 ಪಾವತಿಸಿ, ಸಕ್ಕರೆ ಬೆಲೆಯ ಆಧಾರದಲ್ಲಿ ನಂತರ ಹೆಚ್ಚುವರಿ ಹಣ ನೀಡುವ ಪ್ರಸ್ತಾವ ಚರ್ಚೆಗೆ ಬಂದಿತು. ಆದರೆ, ಮೊದಲ ಕಂತಿನ ಮೊತ್ತವೇ ಸಮರ್ಪಕವಾಗಿಲ್ಲ ಎಂದು ರೈತರು ಆಕ್ಷೇಪಿಸಿದರು. ಎರಡನೇ ಹಾಗೂ ಮೂರನೇ ಕಂತಿನ ಮೊತ್ತ ಮತ್ತು ಪಾವತಿ ಅವಧಿಯನ್ನೂ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಸಕ್ಕರೆ ಬೆಲೆ ಕುರಿತು ಕಾರ್ಖಾನೆಗಳ ಕಡೆಯಿಂದ ಮುಂದಿಡಲಾದ ಲೆಕ್ಕಕ್ಕೂ ರೈತ ಮುಖಂಡರು ತಕರಾರು ವ್ಯಕ್ತಪಡಿಸಿದರು. `ಕಾರ್ಖಾನೆಯವರು ಸಕ್ಕರೆ ಬೆಲೆ ಕೆಜಿಗೆ 45 ಎನ್ನುತ್ತಿದ್ದಾರೆ. ನಮ್ಮ ಪ್ರಕಾರ ರೂ. 50ಕ್ಕಿಂತ ಹೆಚ್ಚಿದೆ. ಹೀಗಿರುವಾಗ ಅವರ ಲೆಕ್ಕದ ಆಧಾರದಲ್ಲೇ ಕಬ್ಬಿನ ದರ ಒಪ್ಪಿಕೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದರು.

ಸಕ್ಕರೆ ಬೆಲೆಗೆ ಅನುಗುಣವಾಗಿ ಮುಂದೆ ಹೆಚ್ಚುವರಿ ಹಣ ನೀಡುವುದಾದರೆ, ಅದರ ಲೆಕ್ಕಾಚಾರ ಮತ್ತು ಪಾವತಿ ವ್ಯವಸ್ಥೆ ಸ್ಪಷ್ಟವಾಗಿರಬೇಕು. ರೈತರಿಗೆ ಅಂತಿಮವಾಗಿ ಸಿಗುವ ಮೊತ್ತದ ಬಗ್ಗೆ ಖಚಿತತೆ ಬೇಕು ಎಂದು ಒತ್ತಾಯಿಸಿದರು.

ರಾತ್ರಿ ಸಂಧಾನವೂ ನಿರ್ಧಾರವಿಲ್ಲದೆ ಮುಕ್ತಾಯ: ಹಗಲಿನ ಚರ್ಚೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾತ್ರಿ 8ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯ್ದ 11 ರೈತ ಮುಖಂಡರೊಂದಿಗೆ ಸತೀಶ್ ಜಾರಕಿಹೊಳಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಅಲ್ಲಿಯೂ ದರ ಹಾಗೂ ಕಂತು ಪಾವತಿಯ ಕುರಿತು ಸಹಮತ ಮೂಡಲಿಲ್ಲ.

ಯಾವುದೇ ಪ್ರಸ್ತಾವವನ್ನು ಕೆಲವೇ ಮುಖಂಡರು ಒಪ್ಪಿಕೊಂಡ ಮಾತ್ರಕ್ಕೆ ಹೋರಾಟದ ಬೇಡಿಕೆ ಇತ್ಯರ್ಥವಾದಂತಾಗುವುದಿಲ್ಲ. ವಿವಿಧ ಸಂಘಟನೆಗಳು ಹಾಗೂ ರೈತರು ಸೇರಿ ನಡೆಸುತ್ತಿರುವ ಚಳವಳಿಯಾದ್ದರಿಂದ, ನಿರ್ಧಾರವನ್ನು ಹೋರಾಟನಿರತ ರೈತರ ಮುಂದಿಟ್ಟು ಚರ್ಚಿಸಬೇಕು ಎಂದು ಮುಖಂಡರು ಸ್ಪಷ್ಟಪಡಿಸಿದರು.

ಬುಧವಾರ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿಕೊಂಡು ಬರುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದರು. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಯೋಗ್ಯ ಪರಿಹಾರ ಒದಗಿಸಬೇಕು; ದರದ ಸಮಸ್ಯೆ ಇತ್ಯರ್ಥಪಡಿಸಿ ಕಾರ್ಖಾನೆಗಳನ್ನು ತಕ್ಷಣ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾವೇರಿಯಲ್ಲಿ ಸಭೆ ವಿಫಲ: ಕಬ್ಬಿನ ದರ ನಿಗದಿ ಕುರಿತು ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಒಮ್ಮತ ಮೂಡದೆ ವಿಫಲವಾಯಿತು. ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಿ ಪ್ರತಿ ಟನ್‌ಗೆ 3500 ರೂ. ನೀಡಬೇಕೆಂದು ರೈತರು ಪಟ್ಟು ಹಿಡಿದರು. ಆದರೆ, ಜಿಎಂ ಶುಗರ್ಸ್ ರೂ. 2800 ಹಾಗೂ ವಿಐಎನ್‌ಪಿ ಕಾರ್ಖಾನೆ ರೂ. 2900 ನೀಡುವ ಪ್ರಸ್ತಾವ ಮುಂದಿಟ್ಟಿದ್ದನ್ನು ರೈತರು ತಿರಸ್ಕರಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸಂಧಾನ ಪ್ರಯತ್ನ ಫಲ ನೀಡಲಿಲ್ಲ. ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ರೈತ ಮುಖಂಡರು ನಿರ್ಧರಿಸಿದರು.

ಬಾಗಲಕೋಟೆಯಲ್ಲಿ ನ. 4ಕ್ಕೆ ಸಭೆ: ಬಾಗಲಕೋಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಯಿತು. ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಸಚಿವರು ಸೂಚಿಸಿದರು. ನ. 4ರಂದು ಮಧ್ಯಾಹ್ನ 3ಕ್ಕೆ ರೈತರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಯಿತು. ಜಿಲ್ಲೆಯಲ್ಲಿ ಈಗಾಗಲೇ 135 ಕಡೆ ಕಬ್ಬಿಗೆ ಬೆಂಕಿ ಅವಘಡ ಸಂಭವಿಸಿ ಅಂದಾಜು 4 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ಎಂಎಸ್‌ಪಿ ನಿಗದಿಪಡಿಸಿದ ಬಳಿಕ ರಾಜ್ಯ ಸರ್ಕಾರ ಎಸ್‌ಎಪಿ ಘೋಷಿಸಬೇಕಿದೆ ಎಂದು ಸಚಿವರು ತಿಳಿಸಿದರು.