ಚಿಕ್ಕಮಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿಗೆ ಪ್ರತಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಹಿಟ್ ಜನತಾ ಪಾರ್ಟಿಯನ್ನು ಸ್ಥಾಪನೆ ಮಾಡಿದ್ದು, ಈ ಪಾರ್ಟಿಯಿಂದ ಜಿರಳೆಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಘೋಷಣೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಬಿಜೆಪಿಯ ವಕ್ತಾರ ಬಿ.ಜಗದೀಶ್ಚಂದ್ರ ಅವರೇ ಕಾಕ್ರೋಚ್ ಜನತಾ ಪಾರ್ಟಿಗೆ (ಸಿಜೆಪಿ) ಪ್ರತಿಯಾಗಿ ಹಿಟ್ ಜನತಾ ಪಾರ್ಟಿ ಸ್ಥಾಪಿಸದವರಾಗಿದ್ದಾರೆ.
ಜಾಲತಾಣಗಳಲ್ಲಿ ಸಿಜೆಪಿ ಎಂಬ ವಿಚಿತ್ರ ಹೆಸರಿನ ಟ್ರೆಂಡ್ ಸದ್ದು ಮಾಡಿರುವ ಬೆನ್ನಲ್ಲೇ ಬಾಳೆಹೊನ್ನೂರಿನ ಬಿಜೆಪಿ ಕಾರ್ಯಕರ್ತರೂ ಆಗಿರುವ ಜಗದೀಶ್ಚಂದ್ರ ಇದಕ್ಕೆ ಸೆಡ್ಡು ಹೊಡೆಯುವ ಉದ್ದೇಶ ಹಾಗೂ ಈ ಜಿರಳೆಗಳ ಹಾವಳಿಗೆ ಬ್ರೇಕ್ ಹಾಕಬೇಕೆಂಬ ಉದ್ದೇಶದಿಂದ ಸ್ವತಃ ಹಿಟ್ ಜನತಾ ಪಾರ್ಟಿ ಎಂದು ಸ್ಥಾಪನೆ ಮಾಡಿ ಘೋಷಣೆ ಮಾಡಿದ್ದು, ತಾವೇ ಇದಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜಿರಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಉದ್ದೇಶದಿಂದಲೇ ಹಿಟ್ ಜನತಾ ಪಾರ್ಟಿ ಮತ್ತು ಲಕ್ಷ್ಮಣರೇಖೆ ಹೆಸರಿನಲ್ಲಿ ಈ ಸಂಘಟನೆಯನ್ನು ತಾವು ಸ್ಥಾಪಿಸಿದ್ದು, ಇಂತಹ ದೇಶ ವಿರೋಧಿ ಜಿರಳೆಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ನಮಗೆ ತಿಳಿದಿದೆ ಎಂದು ಜಗದೀಶ್ಚಂದ್ರ ತಿಳಿಸಿದ್ದಾರೆ.
ಈ ಹಿಟ್ ಪಾರ್ಟಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಈ ಪಾರ್ಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ನಾವು ಜಿರಳೆಗಳಿಗೆ ಹೆದರುವುದಿಲ್ಲ, ಅವುಗಳನ್ನು ಮಟ್ಟ ಹಾಕಲು ನಮ್ಮ ಬಳಿ ಅಸ್ತ್ರಗಳಿವೆ ಎಂಬ ಸ್ಲೋಗನ್‌ಗಳನ್ನೂ ಪೋಸ್ಟರ್‌ಗಳಲ್ಲಿ ಹಾಕಿದ್ದು, ಅದೂ ಗಮನ ಸೆಳೆಯುತ್ತಿದೆ.























