SK Home Ad
Home ನಮ್ಮ ಜಿಲ್ಲೆ ಕಲಬುರಗಿ ನೀಟ್ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಆತ್ಮಹತ್ಯೆ

ನೀಟ್ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಆತ್ಮಹತ್ಯೆ

0
295

ಕಲಬುರಗಿ: ನೀಟ್ (NEET) ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೋರ್ವಳು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜಿಲ್ಲಾ‌ ಕೋರ್ಟ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿನಿಯು ಪಿಯುಸಿ ಪರೀಕ್ಷೆಯಲ್ಲಿ ಶೇ. 92 ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ವೈದ್ಯಕೀಯ ಶಿಕ್ಷಣದ ಕನಸು ಕಂಡಿದ್ದ ಆಕೆ, ಇತ್ತೀಚೆಗಷ್ಟೇ ನೀಟ್ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ.

ಪರೀಕ್ಷೆಯ ಆತಂಕದ ಶಂಕೆ: ಘಟನೆಯ ಬಳಿಕ ಮಾಧ್ಯಮಗಳ ಎದುರು ಮೃತಳ ತಂದೆ ರಾಜಶೇಖರ್ ಅವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ. ಆಕೆಗೆ ನೀಟ್ ಪರೀಕ್ಷೆಯ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಆದರೆ‌ ಪರೀಕ್ಷೆಯ ಫಲಿತಾಂಶದ ಬಗ್ಗೆ ಏನಾದರೂ ಆತಂಕ ಇತ್ತೋ ಏನೋ ತಿಳಿಯದು. ಆಕೆ ಯಾವುದೇ ಡೆತ್‌ನೋಟ್ ಬರೆದಿಲ್ಲ, ಕಾರಣವನ್ನೂ ಹೇಳಿಲ್ಲ. ಕುಟುಂಬಸ್ಥರ ಜತೆ ತುಂಬಾ ಚೆನ್ನಾಗಿಯೇ ಇದ್ದಳು. ನಾವು ಯಾರ ಮೇಲೆಯೂ ಅಪಾದನೆ ಮಾಡುವುದಿಲ್ಲ ಎಂದು ಅವರು ದುಃಖಭರಿತವಾಗಿ ನುಡಿದಿದ್ದಾರೆ.

ಈ‌ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.