ರಿಯಾದ್ (ಸೌದಿ ಅರೇಬಿಯಾ): ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾ ನಗರದಲ್ಲಿ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲಾ 14 ಮಂದಿ ಮೃತಪಟ್ಟಿರುವ ದುರ್ಘಟನೆ ಭಾನುವಾರ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಸೌದಿ ಅರೇಬಿಯಾದ ಪ್ರಜೆಗಳಾಗಿದ್ದು, ಈ ಘಟನೆ ದೇಶದ ತೈಲ ಮತ್ತು ಇಂಧನ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಪ್ರಕಾರ, ಭಾನುವಾರ ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ ಸೌದಿ ಅರಾಮ್ಕೊ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ರಾಸ್ ತನುರಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಪತನಗೊಂಡ ತಕ್ಷಣ ರಕ್ಷಣಾ ತಂಡಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು. ಆದರೆ ಅಪಘಾತದ ತೀವ್ರತೆಯಿಂದಾಗಿ ವಿಮಾನದಲ್ಲಿದ್ದ ಎಲ್ಲ 14 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ: ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು
ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆಗೆ ಆದೇಶಿಸಿದ್ದು, ತಾಂತ್ರಿಕ ದೋಷ, ಹವಾಮಾನ ವೈಪರೀತ್ಯ ಅಥವಾ ಇತರೆ ಕಾರಣಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಸೌದಿ ಇಂಧನ ಸಚಿವಾಲಯ ಈ ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿದೆ. ಅಪಘಾತದ ಕಾರಣ ಪತ್ತೆಹಚ್ಚಲು ಎಲ್ಲ ರೀತಿಯ ತನಿಖೆ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್. ಶಂಕರ್ ಇನ್ನಿಲ್ಲ
ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತು ಸಂಸ್ಥೆಗಳಲ್ಲಿ ಒಂದಾದ ಸೌದಿ ಅರಾಮ್ಕೊ, ಹಲವು ದಶಕಗಳಿಂದ ವೈಮಾನಿಕ ಸೇವೆಗಳನ್ನು ಬಳಸಿಕೊಂಡು ತೈಲ ನಿಕ್ಷೇಪಗಳ ಪತ್ತೆ, ಕಡಲಾಚೆ ಕಾರ್ಯಾಚರಣೆಗಳು, ವೈದ್ಯಕೀಯ ಸ್ಥಳಾಂತರ ಹಾಗೂ ಲಾಜಿಸ್ಟಿಕ್ಸ್ ಸೇವೆಗಳನ್ನು ನಿರ್ವಹಿಸುತ್ತಿದೆ. 2023ರಲ್ಲಿ ಅರಾಮ್ಕೊ ವಾಯುಯಾನ ವಿಭಾಗವನ್ನು ಪ್ರತ್ಯೇಕ ಅಂಗಸಂಸ್ಥೆಯಾಗಿ ರೂಪಿಸಿ, ಅದಕ್ಕೆ ಅಲೌಲಾ ಏವಿಯೇಷನ್ ಎಂದು ಮರುನಾಮಕರಣ ಮಾಡಲಾಗಿತ್ತು. ಪ್ರಸ್ತುತ ಸಂಸ್ಥೆಯು ದೇಶಾದ್ಯಂತ 60ಕ್ಕೂ ಹೆಚ್ಚು ವಿಮಾನಗಳನ್ನು ಕಾರ್ಯಾಚರಣೆಯಲ್ಲಿ ಬಳಸುತ್ತಿದೆ.






















