ಬಾಗ್ದಾದ್: ಇರಾಕ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ, ಮಹಿಳಾ ಸಂಸದರೊಬ್ಬರ ಮನೆಯಲ್ಲಿ 57 ಮಿಲಿಯನ್ ಡಾಲರ್ ನಗದು, 27 ಕೆ.ಜಿ. ಚಿನ್ನ ಹಾಗೂ ಚಿನ್ನದ ಒಳಉಡುಪು ಪತ್ತೆಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳಲ್ಲಿ, ಇರಾಕ್ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ 57 ಮಿಲಿಯನ್ ಡಾಲರ್ ನಗದು ಮತ್ತು 27 ಕೆ.ಜಿ. ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಚಿನ್ನದ ಒಳಉಡುಪಿನ ಫೋಟೋವನ್ನೂ ಇದೇ ಕಾರ್ಯಾಚರಣೆಯಲ್ಲಿ ಸಿಕ್ಕಿದ್ದು ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಆದರೆ ಇರಾಕ್‌ನಲ್ಲಿ ಪ್ರಧಾನಿ ಅಲಿ ಅಲ್-ಜೈದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಕಾರ್ಯಾಚರಣೆ ಆರಂಭಿಸಿರುವುದು ನಿಜವಾದರೂ, ವೈರಲ್ ಆಗಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಸಂಸದರ ಮನೆಯಲ್ಲಿ ಇಷ್ಟೊಂದು ಹಣ, ಚಿನ್ನ ಅಥವಾ ಚಿನ್ನದ ಒಳಉಡುಪು ಪತ್ತೆಯಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಸಾಕ್ಷ್ಯ ಲಭ್ಯವಾಗಿಲ್ಲ.
ಭದ್ರತಾ ಪಡೆಗಳು ಬಾಗ್ದಾದ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 7 ಸಂಸದರು, ಹಲವು ಹಿರಿಯ ಅಧಿಕಾರಿಗಳು ಸೇರಿ 47 ಶಂಕಿತರನ್ನು ಬಂಧಿಸಿವೆ. ಸಾರ್ವಜನಿಕ ಹಣದ ದುರುಪಯೋಗ, ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದ ಆರೋಪದಡಿ ತನಿಖೆ ಮುಂದುವರಿದಿದೆ.
ಇರಾಕಿ ಹೈ ಜುಡಿಷಿಯಲ್ ಕೌನ್ಸಿಲ್ ಮಾಹಿತಿ ಪ್ರಕಾರ, ಮಾಜಿ ಉಪ ತೈಲ ಸಚಿವರಿಗೆ ಸಂಬಂಧಿಸಿದ ತನಿಖೆಯಲ್ಲಿ ಸುಮಾರು 10 ಮಿಲಿಯನ್ ಡಾಲರ್ ನಗದು, 3 ಬಿಲಿಯನ್ ಇರಾಕಿ ದಿನಾರ್, ಚಿನ್ನದ ಆಭರಣಗಳು, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸುಮಾರು 40 ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಹಿಂದ್ ಅಲ್-ಅಬ್ಬಾಸಿ ಅವರು ಇರಾಕ್ ಸಂಸತ್ ಸದಸ್ಯೆಯಾಗಿರುವುದು ನಿಜವಾದರೂ, ಅವರ ಮನೆಯಿಂದ 57 ಮಿಲಿಯನ್ ಡಾಲರ್ ನಗದು, 27 ಕೆ.ಜಿ. ಚಿನ್ನ ಹಾಗೂ ಚಿನ್ನದ ಒಳಉಡುಪು ಪತ್ತೆಯಾಗಿದೆ ಎಂಬ ಆರೋಪವನ್ನು ಇರಾಕ್ ಸರ್ಕಾರ, ನ್ಯಾಯಾಂಗ ಅಥವಾ ತನಿಖಾ ಸಂಸ್ಥೆಗಳು ಇದುವರೆಗೆ ದೃಢಪಡಿಸಿಲ್ಲ.






















