ದಾವಣಗೆರೆ: ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ಚುನಾವಣೆ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಇದೇ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ ಖಂಡ್ರೆ ಪ್ರಕಟಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುದಿನಗಳಿಂದ ಬಾಕಿ ಉಳಿದಿರುವ ಪಂಚಾಯತ್ ಚುನಾವಣೆಗಳ ಕುರಿತು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಚುನಾವಣೆ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಮುಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ನಿಟ್ಟಿನಲ್ಲಿ ಮುಂಬರುವ ಸೆಪ್ಟೆಂಬರ್ ಒಳಗಾಗಿ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಮುಖ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಇದಾದ ತಕ್ಷಣವೇ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳ ಚುನಾವಣೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ಈ ವರ್ಷದ ಅಂತ್ಯದೊಳಗೆ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ಮುಗಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.




















