ಢಾಕಾ: 2024ರ ವಿದ್ಯಾರ್ಥಿ ನೇತೃತ್ವದ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಾಗೂ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಏಳು ಹಿರಿಯ ನಾಯಕರಿಗೆ ಮರಣದಂಡನೆ ವಿಧಿಸಲಾಗಿದೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ-2 ಮಂಗಳವಾರ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಜಿ ಸಚಿವರು ಸೇರಿದಂತೆ ಏಳು ಆರೋಪಿಗಳ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧ, ಹತ್ಯೆ, ಹತ್ಯೆಗೆ ಪ್ರಚೋದನೆ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಮಂಡಳಿ ಹೇಳಿದೆ.
ನ್ಯಾಯಮೂರ್ತಿ ಮೊಹಮ್ಮದ್ ನಜ್ರುಲ್ ಇಸ್ಲಾಂ ಚೌಧರಿ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ತೀರ್ಪು ನೀಡಿದ್ದು, ಎಲ್ಲಾ ಏಳು ಮಂದಿಗೂ ಗೈರುಹಾಜರಿಯಲ್ಲೇ ಮರಣದಂಡನೆ ವಿಧಿಸಲಾಗಿದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಯಾರಿಗೆ ಮರಣದಂಡನೆ?: ಮರಣದಂಡನೆಗೆ ಗುರಿಯಾದವರಲ್ಲಿ ಅವಾಮಿ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾದರ್ ಹಾಗೂ ಮಾಜಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಮೊಹಮ್ಮದ್ ಅಲಿ ಅರಾಫತ್ ಪ್ರಮುಖರಾಗಿದ್ದಾರೆ.
ಇವರ ಜೊತೆಗೆ ಅವಾಮಿ ಲೀಗ್ ಜಂಟಿ ಪ್ರಧಾನ ಕಾರ್ಯದರ್ಶಿ ಎಎಫ್‌ಎಂ ಬಹಾವುದ್ದೀನ್ ನಾಸಿಮ್, ಜುಬೋ ಲೀಗ್ ಅಧ್ಯಕ್ಷ ಶೇಖ್ ಫಜ್ಲೆ ಶಮ್ಸ್ ಪರಾಶ್, ಪ್ರಧಾನ ಕಾರ್ಯದರ್ಶಿ ಮೈನೂಲ್ ಹೊಸೈನ್ ಖಾನ್ ನಿಖಿಲ್, ಛಾತ್ರ ಲೀಗ್ ಅಧ್ಯಕ್ಷ ಸದ್ದಾಂ ಹುಸೈನ್ ಹಾಗೂ ಪ್ರಧಾನ ಕಾರ್ಯದರ್ಶಿ ಶೇಖ್ ವಾಲಿ ಆಸಿಫ್ ಎನಾನ್ ಅವರಿಗೂ ಮರಣದಂಡನೆ ವಿಧಿಸಲಾಗಿದೆ.
2024ರ ಹಿಂಸಾಚಾರದಲ್ಲಿ 1,400 ಮಂದಿ ಸಾವು: 2024ರ ಜುಲೈ–ಆಗಸ್ಟ್ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದವು. ಅಂದಿನ ಶೇಖ್ ಹಸೀನಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಕೈಗೊಂಡ ಕ್ರಮಗಳಲ್ಲಿ ಸುಮಾರು 1,400 ಮಂದಿ ಮೃತಪಟ್ಟಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ಹಿಂಸಾಚಾರವೇ ನಂತರ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಸುಮಾರು 15 ವರ್ಷಗಳ ಕಾಲ ಬಾಂಗ್ಲಾದೇಶವನ್ನು ಆಳಿದ್ದ ಶೇಖ್ ಹಸೀನಾ ಅವರು 2024ರ ಆಗಸ್ಟ್‌ನಲ್ಲಿ ದೇಶ ತೊರೆದು ಭಾರತಕ್ಕೆ ಬಂದಿದ್ದರು.






















