ವಿಮಾನಗಳಿಗಿಂತ 3 ಪಟ್ಟು ಎತ್ತರದಿಂದ ಫೋನ್ ಡ್ರಾಪ್: ಸಂಪೂರ್ಣ ಸುರಕ್ಷಿತವಾಗಿ ಪತ್ತೆ – ವಿಶ್ವ ದಾಖಲೆ ಸೃಷ್ಟಿಸಿದ ಈ ಮೊಬೈಲ್ ಕೇಸ್ ಮಾಡಿದ್ದೇನು? :
ಮೊಬೈಲ್ ಫೋನ್ ಕೆಳಗೆ ಬಿದ್ದರೆ ಸಾಮಾನ್ಯವಾಗಿ ಸ್ಕ್ರೀನ್ ಒಡೆಯುವುದು, ಬಾಡಿ ಹಾಳಾಗುವುದು ಸಾಮಾನ್ಯ. ಆದರೆ ಮೊಬೈಲ್‌ವೊಂದನ್ನು ಭೂಮಿಯಿಂದ ಬರೋಬ್ಬರಿ 30,607 ಮೀಟರ್ (100,418 ಅಡಿ) ಎತ್ತರದಿಂದ ಕೆಳಗೆ ಬೀಳಿಸಿದರೂ ಅದು ಸಂಪೂರ್ಣವಾಗಿ ಸುರಕ್ಷಿತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ.
ಮೊಬೈಲ್ ಕೇಸ್ ತಯಾರಿಸುವ RHINOSHIELD ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವ Sent Into Space ಸಂಸ್ಥೆಗಳು ಜಂಟಿಯಾಗಿ ಈ ಪ್ರಯೋಗ ನಡೆಸಿವೆ. ತಮ್ಮ ಮೊಬೈಲ್ ಕೇಸ್‌ನ ಸಾಮರ್ಥ್ಯವನ್ನು ಪರೀಕ್ಷಿಸುವುದರ ಜೊತೆಗೆ, ಈ ಪ್ರಯೋಗದ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಯನ್ನೂ ನಿರ್ಮಿಸಲಾಗಿದೆ.
ಸ್ವೀಡನ್‌ನ ಕಿರುನಾ ಪ್ರದೇಶದಲ್ಲಿ ಜೂನ್ 24ರಂದು ಮೊಬೈಲ್ ಅನ್ನು ಸುಮಾರು 30.6 ಕಿಲೋಮೀಟರ್ ಎತ್ತರದಿಂದ ಭೂಮಿಯತ್ತ ಬೀಳಿಸಲಾಯಿತು. ಬಳಿಕ ಅದನ್ನು ಪತ್ತೆಹಚ್ಚಿ ವಶಕ್ಕೆ ಪಡೆದಾಗ ಮೊಬೈಲ್‌ಗೆ ಯಾವುದೇ ಹಾನಿಯಾಗಿರಲಿಲ್ಲ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಿಳಿಸಿದೆ.
ಈ ಎತ್ತರ ಸಾಮಾನ್ಯ ವಾಣಿಜ್ಯ ವಿಮಾನಗಳು ಹಾರುವ ಸುಮಾರು 9,000 ಮೀಟರ್ ಎತ್ತರಕ್ಕಿಂತ ಮೂರು ಪಟ್ಟು ಹೆಚ್ಚು. ಅಲ್ಲದೆ, ವಿಶ್ವದ ಅತಿ ಎತ್ತರದ ಪರ್ವತವಾದ ಎವರೆಸ್ಟ್‌ನ 8,848 ಮೀಟರ್ ಎತ್ತರಕ್ಕಿಂತಲೂ ಮೂರು ಪಟ್ಟು ಹೆಚ್ಚು ಎಂಬುದು ಈ ಪ್ರಯೋಗದ ವಿಶೇಷತೆ.
ಈ ಸಾಹಸವನ್ನು “highest drop of a mobile phone in a phone case (natural landforms)” ಎಂಬ ಗಿನ್ನೆಸ್ ವಿಶ್ವ ದಾಖಲೆಯಾಗಿ ದಾಖಲಿಸಲಾಗಿದೆ. ಅಂದರೆ, ನೈಸರ್ಗಿಕ ಭೂಪ್ರದೇಶದ ಮೇಲೆ ಮೊಬೈಲ್ ಕೇಸ್‌ನೊಂದಿಗೆ ಮೊಬೈಲ್ ಫೋನ್ ಅನ್ನು ಅತಿ ಎತ್ತರದಿಂದ ಬೀಳಿಸಿ ಸುರಕ್ಷಿತವಾಗಿ ಮರಳಿ ಪಡೆಯುವ ದಾಖಲೆಯಾಗಿದೆ.
RHINOSHIELD ಸಂಸ್ಥೆಯ ಬ್ರ್ಯಾಂಡ್ ಎಕ್ಸ್‌ಪೀರಿಯನ್ಸ್ ಮ್ಯಾನೇಜರ್ ಮುಜೌ ಹ್ಸಿಯಾವೊ ಪ್ರಕಾರ, ಈ ಪ್ರಯೋಗದ ಆಲೋಚನೆ ಸಂಸ್ಥೆಯ ಸಂಸ್ಥಾಪಕ ಎರಿಕ್ ವಾಂಗ್ ಅವರ “ವೈಲ್ಡ್ ಐಡಿಯಾ”ಯಿಂದ ಆರಂಭವಾಗಿತ್ತು. ಬಳಿಕ ಅದನ್ನು ನಿಜವಾದ ಪರೀಕ್ಷೆಯಾಗಿ ರೂಪಿಸಿ ಬಾಹ್ಯಾಕಾಶದ ಅಂಚಿನಷ್ಟು ಎತ್ತರದಿಂದ ಮೊಬೈಲ್‌ನ್ನು ಬೀಳಿಸುವ ಪ್ರಯತ್ನ ನಡೆಸಲಾಗಿದೆ.
ಈ ಪ್ರಯೋಗದ ಮೂಲಕ ಮೊಬೈಲ್ ಕೇಸ್‌ನ ಬಾಳಿಕೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿ ಮೊಬೈಲ್ ಅನ್ನು ಮರಳಿ ಪಡೆಯಲಾಗಿದೆ. ಗಿನ್ನೆಸ್ ದಾಖಲೆಯೊಂದಿಗೆ ಈ ಪ್ರಯೋಗ ಇದೀಗ ತಂತ್ರಜ್ಞಾನ ಮತ್ತು ಮೊಬೈಲ್ ಆಕ್ಸೆಸರೀಸ್ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.




















