SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಿನಲ್ಲಿ 4ನೇ ʻಸಿಐಐ ಕರ್ನಾಟಕ ESG ಶೃಂಗಸಭೆ 2026ʼ ಯಶಸ್ವಿ

ಬೆಂಗಳೂರಿನಲ್ಲಿ 4ನೇ ʻಸಿಐಐ ಕರ್ನಾಟಕ ESG ಶೃಂಗಸಭೆ 2026ʼ ಯಶಸ್ವಿ

0
26

ಬೆಂಗಳೂರು: ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕರ್ನಾಟಕ ಮತ್ತು ಸಿಐಐ-ಐಟಿಸಿ ಸುಸ್ಥಿರ ಅಭಿವೃದ್ಧಿ ಶ್ರೇಷ್ಠತಾ ಕೇಂದ್ರದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ 4ನೇ ಆವೃತ್ತಿಯ ಸಿಐಐ ಕರ್ನಾಟಕ ಇಎಸ್‍ಜಿ (ESG) ಶೃಂಗಸಭೆ 2026 ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. “ಹವಾಮಾನ-ಸ್ಥಿರ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ನಿರ್ಮಾಣ: ಇಎಸ್‍ಜಿ ಬದ್ಧತೆಯಿಂದ ಕ್ರಿಯಾಚರಣೆಯತ್ತ” ಎಂಬ ಪ್ರಮುಖ ಪರಿಕಲ್ಪನೆಯಡಿ ಈ ಕಾರ್ಯಕ್ರಮ ನಡೆಯಿತು.

ಶೃಂಗಸಭೆಯಲ್ಲಿ ಉದ್ಯಮ ನಾಯಕರು, ನೀತಿ ನಿರೂಪಕರು ಹಾಗೂ ಪರಿಸರ ತಜ್ಞರು ಭಾಗವಹಿಸಿ ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತು ಪಾರದರ್ಶಕ ಆಡಳಿತದ ಕುರಿತು ಚರ್ಚೆ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಧ್ಯಕ್ಷ ಶ್ರೀನಿವಾಸುಲು (IFS), “ಹವಾಮಾನ ವೈಪರೀತ್ಯವು ಕೇವಲ ಪರಿಸರದ ವಿಷಯವಲ್ಲ, ಅದು ಉದ್ಯಮ ಮತ್ತು ಆರ್ಥಿಕತೆಗೆ ದೊಡ್ಡ ಅಪಾಯವಾಗಿದೆ. ಹಾಗಾಗಿ ಹವಾಮಾನ ಪ್ರಜ್ಞೆಯನ್ನು ಪ್ರತಿಯೊಂದು ವಾಣಿಜ್ಯ ಮತ್ತು ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು” ಎಂದು ಪ್ರತಿಪಾದಿಸಿದರು.

ವೋಲ್ವೋ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಐಐ ದಕ್ಷಿಣ ವಲಯದ ಮಾಜಿ ಅಧ್ಯಕ್ಷ ಕಮಲ್ ಬಾಲಿ ಮಾತನಾಡಿ, “ಇಎಸ್‍ಜಿ ತತ್ವಗಳು ಬರಿ ಆಶಯವಾಗಿ ಉಳಿಯದೆ ಅನುಷ್ಠಾನಕ್ಕೆ ಬರಬೇಕು. ಪೂರೈಕೆ ಸರಣಿ, ಉತ್ಪನ್ನಗಳು ಮತ್ತು ಮಾನವ ಸಂಪನ್ಮೂಲಗಳಲ್ಲಿ ಸುಸ್ಥಿರತೆಯನ್ನು ತರುವುದು ಇಂದಿನ ಅಗತ್ಯವಾಗಿದೆ” ಎಂದರು.

ಈ ಶೃಂಗಸಭೆಯು ಕೇವಲ ನಿಯಮಗಳ ಪಾಲನೆಗೆ ಸೀಮಿತವಾಗದೆ, ದೀರ್ಘಕಾಲೀನ ಬೆಳೆವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಹೊಸ ದಾರಿ ತೋರಿಸಿಕೊಟ್ಟಿತು.