SK Home Ad
Home ಸುದ್ದಿ ವಿದೇಶ ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ 734 ಬಲಿ, 2,500 ಮಂದಿ ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ 734 ಬಲಿ, 2,500 ಮಂದಿ ನಾಪತ್ತೆ

0
57

ಕಾಠ್ಮಂಡು: ನೇಪಾಳದಲ್ಲಿ ಬೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 734ಕ್ಕೆ ಏರಿಕೆಯಾಗಿದೆ. ಇನ್ನೂ 2,500 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 589 ಮಂದಿ ವಿದೇಶೀಯರು ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ತಿಳಿಸಿದೆ.

ಪ್ರವಾಹದಿಂದ ನಾಪತ್ತೆಯಾದವರ ಮೃತದೇಹಗಳು ಎಂಟು ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ಚಿತ್ವಾನ್ ಜಿಲ್ಲೆಯಲ್ಲಿ ಗರಿಷ್ಠ 259 ಶವಗಳು ದೊರೆತಿದ್ದು, ನವಾಲ್‌ಪರಾಸಿ ಪೂರ್ವದಲ್ಲಿ 184, ನವಾಲ್‌ಪರಾಸಿ ಪಶ್ಚಿಮದಲ್ಲಿ 82, ಗೋರಖಾದಲ್ಲಿ 58, ನುವಾಕೋಟ್‌ನಲ್ಲಿ 52, ಧಾದಿಂಗ್‌ನಲ್ಲಿ 50, ತನಹುನ್‌ನಲ್ಲಿ 36 ಹಾಗೂ ರಸುವಾದಲ್ಲಿ 13 ಮೃತದೇಹಗಳು ಪತ್ತೆಯಾಗಿವೆ.

ಭಾರತ-ಚೀನಾ ಗಡಿ ಜಿಲ್ಲೆಗಳಲ್ಲಿ ಭೀಕರ ಸ್ಥಿತಿ: ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ರಸುವಾ ಹಾಗೂ ನುವಾಕೋಟ್ ಜಿಲ್ಲೆಗಳು ಪ್ರವಾಹದ ತೀವ್ರ ಹೊಡೆತಕ್ಕೆ ಸಿಲುಕಿವೆ. ನೂರಾರು ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಕೊಚ್ಚಿಹೋಗಿದ್ದು, ಹಲವು ಪ್ರದೇಶಗಳು ಕೆಸರು ಮತ್ತು ಅವಶೇಷಗಳಿಂದ ಸಂಪೂರ್ಣ ಮುಚ್ಚಿಹೋಗಿವೆ. ಪ್ರಮುಖ ಹೆದ್ದಾರಿಗಳು ಹಾಗೂ ಸೇತುವೆಗಳು ಹಾನಿಗೊಳಗಾಗಿರುವುದರಿಂದ ಹಲವು ಪ್ರದೇಶಗಳಿಗೆ ಭೂಮಾರ್ಗದ ಸಂಪರ್ಕ ಕಡಿತಗೊಂಡಿದೆ.

ರಸುವಾ ಜಿಲ್ಲೆಯ ಜಲವಿದ್ಯುತ್ ಯೋಜನೆಗಳ ಸುರಂಗಗಳು ರಕ್ಷಣಾ ಕಾರ್ಯಾಚರಣೆಯ ಪ್ರಮುಖ ಕೇಂದ್ರಗಳಾಗಿವೆ. ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ನೂರಾರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನೇಪಾಳ ಸೇನೆ ಈಗಾಗಲೇ 350 ಮಂದಿ ಕಾರ್ಮಿಕರು ಹಾಗೂ ಸ್ಥಳೀಯರನ್ನು ಸುರಕ್ಷಿತವಾಗಿ ಹೊರತಂದಿದ್ದು, ಇನ್ನೂ ಹಲವರು ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಸ್ವತಂತ್ರ ವಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರವಾಹದಿಂದಾಗಿ ಒಂಬತ್ತು ಜಲವಿದ್ಯುತ್ ಯೋಜನೆಗಳ 537 ಕಾರ್ಮಿಕರು ಮತ್ತು ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅಪ್ಪರ್ ತ್ರಿಶೂಲಿ-1 ಯೋಜನೆಯಲ್ಲೇ ಸುಮಾರು 300 ಮಂದಿ ಇನ್ನೂ ಸುರಂಗದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಆಫ್ ನೇಪಾಳದ ಮಾಹಿತಿ ಆಧರಿಸಿ ವರದಿಯಾಗಿದೆ.

ಮಣ್ಣಿನಡಿ ಮೂರು ದಿನ; ಬದುಕುಳಿದ ಬಾಲಕಿ: ಇದರ ನಡುವೆ, ರಸುವಾ ಜಿಲ್ಲೆಯ ಟಿಮುರೆ ಪ್ರದೇಶದಲ್ಲಿ ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಆರು ವರ್ಷದ ಬಾಲಕಿಯನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದಿರುವುದು ದುರಂತದ ನಡುವೆ ಭರವಸೆ ಮೂಡಿಸಿದೆ.

ಭೋಟೆ ಕೋಶಿ ನದಿಯ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ನೇಪಾಳ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಅವಶೇಷಗಳ ಅಡಿಯಿಂದ ಬಾಲಕಿಯ ಅಳುವ ಧ್ವನಿ ಕೇಳಿಸಿತು. ಕೂಡಲೇ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿ ಬಾಲಕಿಯನ್ನು ಸುರಕ್ಷಿತವಾಗಿ ಹೊರತೆಗೆದರು.

ಬಾಲಕಿಯನ್ನು ಮೊದಲು ಟಿಮುರೆಯಲ್ಲಿರುವ ಸಶಸ್ತ್ರ ಪೊಲೀಸ್ ಪಡೆಯ ಗಡಿ ಠಾಣೆಗೆ ಕರೆದೊಯ್ಯಲಾಯಿತು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಾಠ್ಮಂಡುವಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಪ್ರತಿಕೂಲ ಹವಾಮಾನ ಹಾಗೂ ಕತ್ತಲಿನಿಂದ ಶುಕ್ರವಾರ ಏರ್‌ಲಿಫ್ಟ್ ಸಾಧ್ಯವಾಗದಿದ್ದರೂ, ಶನಿವಾರ ಮಧ್ಯಾಹ್ನ ಆಕೆಯನ್ನು ವಿಮಾನದ ಮೂಲಕ ಕಾಠ್ಮಂಡುವಿಗೆ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

11 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ಶೋಧ: ಮೃತದೇಹಗಳ ಪತ್ತೆ ಹಾಗೂ ನಾಪತ್ತೆಯಾದವರಿಗಾಗಿ ನೇಪಾಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯ ತೀವ್ರಗೊಂಡಿದೆ. ಕೆಸರು, ಭಾರೀ ಅವಶೇಷಗಳು, ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳು ಕಾರ್ಯಾಚರಣೆಗೆ ಅಡ್ಡಿಯಾಗಿವೆ. ಆದರೂ ಸಾವಿರಾರು ಭದ್ರತಾ ಸಿಬ್ಬಂದಿ ವಿವಿಧ ಜಿಲ್ಲೆಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರವಾಹದ ಪರಿಣಾಮವಾಗಿ ಸಂಪರ್ಕ ಕಡಿತಗೊಂಡ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು, ಗಾಯಾಳುಗಳು ಮತ್ತು ಸಿಲುಕಿಕೊಂಡವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ನೆರವಿಗೆ ಧಾವಿಸಿದ ಭಾರತ: ದುರಂತದ ಹಿನ್ನೆಲೆಯಲ್ಲಿ ಭಾರತವು ನೇಪಾಳಕ್ಕೆ ತುರ್ತು ಮಾನವೀಯ ನೆರವು ನೀಡುತ್ತಿದೆ. ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಇದುವರೆಗೆ 68.5 ಟನ್ ಪರಿಹಾರ ಸಾಮಗ್ರಿ ನೇಪಾಳಕ್ಕೆ ತಲುಪಿಸಲಾಗಿದೆ. ಇದರಲ್ಲಿ ಔಷಧ, ಆಹಾರ ಪ್ಯಾಕೆಟ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು, ಜನರೇಟರ್‌ಗಳು, ಟೆಂಟ್‌ಗಳು ಹಾಗೂ ಇತರ ಅಗತ್ಯ ವಸ್ತುಗಳು ಸೇರಿವೆ.

ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಭಾರತದಿಂದ ವಿಶೇಷ ತಾಂತ್ರಿಕ ತಂಡವನ್ನೂ ಕಳುಹಿಸಲಾಗಿದೆ. ವೈದ್ಯರು, ಪ್ಯಾರಾಮೆಡಿಕ್ಸ್ ಮತ್ತು ಸುರಂಗ ಎಂಜಿನಿಯರ್‌ಗಳನ್ನು ಒಳಗೊಂಡ ತಂಡವು ಸ್ಥಳ ಪರಿಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗುತ್ತಿದೆ. ಮೃತದೇಹಗಳ ಗುರುತಿಸುವಿಕೆಗಾಗಿ ಡಿಎನ್‌ಎ ವಿಶ್ಲೇಷಣೆಗೆ ಫಾರೆನ್ಸಿಕ್ ತಜ್ಞರ ತಂಡವನ್ನೂ ಭಾರತ ಕಳುಹಿಸುತ್ತಿದೆ.

ಪ್ರವಾಹದಿಂದ ಧ್ವಂಸಗೊಂಡ ಸೇತುವೆಗಳ ಬದಲಿಗೆ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲು ಅಗತ್ಯವಿರುವ ಉಪಕರಣಗಳನ್ನೂ ಭಾರತ ರವಾನಿಸಿದೆ. 230 ಅಡಿ ಉದ್ದದ ಸಿಂಗಲ್ ಲೇನ್ ಮಾಡ್ಯುಲರ್ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬೇಕಾದ ಉಪಕರಣಗಳನ್ನು ಹೊತ್ತ 16 ಟ್ರಕ್‌ಗಳು ನೇಪಾಳ ತಲುಪಿವೆ. ಇನ್ನೂ ಏಳು ಬೈಲಿ ಸೇತುವೆಗಳಿಗೆ ಬೇಕಾದ ಉಪಕರಣಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ಚೀನಾದಿಂದ ನೇಪಾಳಕ್ಕೆ ಬಂದ ಭಾರತೀಯರು: ಪ್ರವಾಹದಿಂದ ಚೀನಾ-ನೇಪಾಳ ಗಡಿ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಲ್ಲಿ 598 ಭಾರತೀಯರು ಚೀನಾದಿಂದ ನೇಪಾಳ ಪ್ರವೇಶಿಸಿದ್ದಾರೆ. ಚೀನಾದಲ್ಲಿರುವ ಇನ್ನೂ ಸುಮಾರು 900 ಭಾರತೀಯರು ಸುರಕ್ಷಿತವಾಗಿದ್ದು, ಅವರೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ನೇಪಾಳದ ಈ ದುರಂತವು ಈಗಾಗಲೇ ಭಾರೀ ಮಾನವೀಯ ಹಾಗೂ ಮೂಲಸೌಕರ್ಯ ನಷ್ಟಕ್ಕೆ ಕಾರಣವಾಗಿದ್ದು, ಸಾವಿರಾರು ಕುಟುಂಬಗಳು ತಮ್ಮವರಿಗಾಗಿ ಆತಂಕದಿಂದ ಕಾಯುತ್ತಿವೆ. ಹವಾಮಾನ ವೈಪರೀತ್ಯ, ಹಿಮನದಿ ಪ್ರದೇಶಗಳ ಅಸ್ಥಿರತೆ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂಕುಸಿತದ ಅಪಾಯದಿಂದಾಗಿ ರಕ್ಷಣಾ ಕಾರ್ಯಾಚರಣೆಯೂ ಸವಾಲಾಗಿ ಪರಿಣಮಿಸಿದೆ. ರಕ್ಷಣಾ ತಂಡಗಳು ಇನ್ನೂ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ.