SK Home Ad
Home ಸಿನಿ ಮಿಲ್ಸ್ ಟಾಕ್ಸಿಕ್ ರಿಲೀಸ್‌ಗೆ ಮುನ್ನ ಧರ್ಮಸ್ಥಳಕ್ಕೆ ಯಶ್ ಭೇಟಿ: ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ

ಟಾಕ್ಸಿಕ್ ರಿಲೀಸ್‌ಗೆ ಮುನ್ನ ಧರ್ಮಸ್ಥಳಕ್ಕೆ ಯಶ್ ಭೇಟಿ: ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ

0
41

ಮಂಗಳೂರು: ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ವಿಶ್ವಾದ್ಯಂತ ತೆರೆಕಾಣಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಇಂದು (ಆಗಸ್ಟ್ 25) ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಯಶ್ ಆಗಮಿಸುತ್ತಿದ್ದಂತೆ ಅಲ್ಲಿದ್ದ ಅಭಿಮಾನಿಗಳು ಹಾಗೂ ಮುಖಂಡರು ಅವರನ್ನು ಪುಷ್ಪಗುಚ್ಛ ನೀಡಿ, ಜೈಕಾರ ಕೂಗಿ ಅದ್ದೂರಿಯಾಗಿ ಸ್ವಾಗತಿಸಿದರು.

ಸಿನಿಮಾ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ: ತಮ್ಮ ಸಿನಿಮಾಗಳ ಬಿಡುಗಡೆಗೂ ಮುನ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಯಶ್ ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ‘ಟಾಕ್ಸಿಕ್’ ಚಿತ್ರದ ಮುಹೂರ್ತದ ಸಂದರ್ಭದಲ್ಲೂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಯಶ್, ಇದೀಗ ಸಿನಿಮಾ ಬಿಡುಗಡೆಗೂ ಮುನ್ನ ಮತ್ತೊಮ್ಮೆ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಆಗಮಿಸಿದ್ದಾರೆ.

ಧರ್ಮಸ್ಥಳದ ಬಳಿಕ ಉಜಿರೆಯ ಸಮೀಪದಲ್ಲಿರುವ ಖ್ಯಾತ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೂ ಯಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಅರ್ಪಿಸಲಿದ್ದಾರೆ.

ಸಂಜೆ ಕೊಚ್ಚಿಗೆ ಪ್ರಯಾಣ: ದೇವಸ್ಥಾನಗಳ ದರ್ಶನ ಹಾಗೂ ಪೂಜೆ ಮುಗಿಸಿದ ಬಳಿಕ ಯಶ್ ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕೇರಳದ ಕೊಚ್ಚಿಗೆ ತೆರಳಲಿದ್ದಾರೆ. ಅಲ್ಲಿ ‘ಟಾಕ್ಸಿಕ್’ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಶ್ ಅವರನ್ನು ಸ್ವಾಗತಿಸಿದ ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ ಅವರು, ಯಶ್ ಚೆನ್ನೈನಿಂದ ನೇರವಾಗಿ ಮಂಗಳೂರಿಗೆ ಆಗಮಿಸಿದ್ದು, ಧರ್ಮಸ್ಥಳ ಮತ್ತು ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಂಜೆ ಕೊಚ್ಚಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆ ವಿಶ್ವಾದ್ಯಂತ ‘ಟಾಕ್ಸಿಕ್’ ಹವಾ: ಯಶ್ ನಟನೆ ಹಾಗೂ ನಿರ್ಮಾಣದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧೆಡೆ ಬೆಳಗ್ಗೆ 6 ಗಂಟೆಯಿಂದ ಮೊದಲ ಪ್ರದರ್ಶನ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಾಗತಿಕ ಮಟ್ಟದಲ್ಲಿ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ತೆರೆಗಳಲ್ಲಿ ‘ಟಾಕ್ಸಿಕ್’ ತೆರೆಕಾಣುವ ನಿರೀಕ್ಷೆಯಿದೆ. ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ಚಿತ್ರ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಿಡುಗಡೆಗೂ ಮುನ್ನವೇ ಹೊಸ ದಾಖಲೆಗಳ ನಿರೀಕ್ಷೆ ಮೂಡಿಸಿದೆ.

‘ಕೆಜಿಎಫ್’ ಸರಣಿಯ ಬಳಿಕ ಯಶ್ ಅವರ ಜಾಗತಿಕ ಮಟ್ಟದ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿರುವ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ.