SK Home Ad
Home ಕ್ರೀಡೆ 19 ಸಿಕ್ಸರ್, 7 ಬೌಂಡರಿಗಳ ಸುನಾಮಿ:  ಟಿ20 ಕ್ರಿಕೆಟ್‌ನಲ್ಲಿ ಹೊಸ ಭಾರತೀಯ ದಾಖಲೆ ಬರೆದ ಪ್ರಿಯಾಂಶ್...

19 ಸಿಕ್ಸರ್, 7 ಬೌಂಡರಿಗಳ ಸುನಾಮಿ:  ಟಿ20 ಕ್ರಿಕೆಟ್‌ನಲ್ಲಿ ಹೊಸ ಭಾರತೀಯ ದಾಖಲೆ ಬರೆದ ಪ್ರಿಯಾಂಶ್ ಆರ್ಯ!

0
40

ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಟಿ20 ಟೂರ್ನಿಯಲ್ಲಿ ದೆಹಲಿ ತಂಡದ ನಾಯಕ ಪ್ರಿಯಾಂಶ್ ಆರ್ಯ ಅಕ್ಷರಶಃ ರನ್ ಸುನಾಮಿ ಎಬ್ಬಿಸಿದ್ದು, ತಮಿಳುನಾಡು ವಿರುದ್ಧ ಕೇವಲ 68 ಎಸೆತಗಳಲ್ಲಿ ಬರೋಬ್ಬರಿ 181 ರನ್ ಸಿಡಿಸುವ ಮೂಲಕ ಭಾರತೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಇಂದೋರ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 266.17ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ 25 ವರ್ಷದ ಎಡಗೈ ಆರಂಭಿಕ ಆಟಗಾರ, 19 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿ ತಮಿಳುನಾಡು ಬೌಲರ್‌ಗಳನ್ನು ಹೈರಾಣಾಗಿಸಿದರು.

ಧೂಳೀಪಟವಾದ ಘಟಾನುಘಟಿಗಳ ದಾಖಲೆಗಳು:

ಭಾರತೀಯರ ಸಾರ್ವಕಾಲಿಕ ಗರಿಷ್ಠ ಸ್ಕೋರ್: ಮಹಿಳಾ ಹಿರಿಯರ ಟಿ20 ಟ್ರೋಫಿಯಲ್ಲಿ ಕಿರಣ್ ನವಗಿರೆ (162 ರನ್) ಹಾಗೂ ಪುರುಷರ ಟಿ20ಯಲ್ಲಿ ಕೆ.ಎಲ್. ರಾಹುಲ್ (152* ರನ್) ಹೆಸರಲ್ಲಿದ್ದ ಭಾರತೀಯರ ಗರಿಷ್ಠ ವೈಯಕ್ತಿಕ ರನ್ ದಾಖಲೆಯನ್ನು ಪ್ರಿಯಾಂಶ್ ಮುರಿದಿದ್ದಾರೆ.

SMAT ಇತಿಹಾಸದಲ್ಲೇ ನಂ.1: ತಿಲಕ್ ವರ್ಮಾ (151* ರನ್) ಹಾಗೂ ಅಭಿಷೇಕ್ ಶರ್ಮಾ (148 ರನ್) ಅವರ ದಾಖಲೆಗಳನ್ನು ಹಿಂದಿಕ್ಕಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ಗರಿಷ್ಠ ವೈಯಕ್ತಿಕ ಮೊತ್ತ ಪೇರಿಸಿದ ಬ್ಯಾಟರ್ ಎನಿಸಿಕೊಂಡರು.

ವಿಶ್ವದಾಖಲೆಗೆ ಕೇವಲ 7 ರನ್ ಬಾಕಿ: ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಲುವಾನ್-ಡ್ರೆ ಪ್ರಿಟೋರಿಯಸ್ (188* ರನ್) ನಂತರ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಹೆಗ್ಗಳಿಕೆಗೆ ಪ್ರಿಯಾಂಶ್ ಪಾತ್ರರಾದರು. ಅಲ್ಲದೆ, ಟಿ20 ಕ್ರಿಕೆಟ್‌ನಲ್ಲಿ ನಾಯಕನೊಬ್ಬ ಗಳಿಸಿದ ವಿಶ್ವದ ಗರಿಷ್ಠ ಸ್ಕೋರ್ ದಾಖಲೆಯನ್ನೂ (ಆ್ಯರನ್ ಫಿಂಚ್ – 172 ರನ್) ತಮ್ಮ ಹೆಸರಿಗೆ ಬರೆದುಕೊಂಡರು.

19 ಸಿಕ್ಸರ್ ವಿಶ್ವದಾಖಲೆ ಸರಿಗಟ್ಟಿದ ಆರ್ಯ: ಒಂದೇ ಟಿ20 ಇನಿಂಗ್ಸ್‌ನಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ನ್ಯೂಜಿಲೆಂಡ್‌ನ ಫಿನ್ ಅಲೆನ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ ಪ್ರಿಯಾಂಶ್, ಕ್ರಿಸ್ ಗೇಲ್ (18 ಸಿಕ್ಸರ್) ದಾಖಲೆಯನ್ನು ಹಿಂದಿಕ್ಕಿದರು.

ಪ್ರಿಯಾಂಶ್ ಆರ್ಯ ಅವರ ಈ ವೀರಾವೇಶದ ಬ್ಯಾಟಿಂಗ್ ನೆರವಿನಿಂದ ದೆಹಲಿ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 275 ರನ್‌ಗಳ ಬೃಹತ್ ಮೊತ್ತ ಪೇರಿಸಿತು.