SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಏಳು ತಿಂಗಳ ಗರ್ಭಿಣಿ ಪೊಲೀಸ್‌ ಪೇದೆ ಡೆಂಗ್ಯೂನಿಂದ ನಿಧನ: ತಾಯಿ-ಮಗುವಿನ ದುರಂತ ಅಂತ್ಯ

ಏಳು ತಿಂಗಳ ಗರ್ಭಿಣಿ ಪೊಲೀಸ್‌ ಪೇದೆ ಡೆಂಗ್ಯೂನಿಂದ ನಿಧನ: ತಾಯಿ-ಮಗುವಿನ ದುರಂತ ಅಂತ್ಯ

0
6
ಡೆಂಗ್ಯೂಗೆ ಕುಷ್ಟಗಿ ಪೊಲೀಸ್‌ ಪೇದೆ ಬಲಿ; ಗರ್ಭದಲ್ಲಿದ್ದ ಏಳು ತಿಂಗಳ ಮಗು ಕೂಡ ಸಾವು

ಕುಷ್ಟಗಿಯಲ್ಲಿ ಹೃದಯವಿದ್ರಾವಕ ಘಟನೆ; ಡೆಂಗ್ಯೂ ಜ್ವರಕ್ಕೆ ಗರ್ಭಿಣಿ ಪೊಲೀಸ್‌ ಪೇದೆ ಬಲಿ – ಪತ್ನಿ ಮತ್ತು ಹುಟ್ಟದ ಮಗುವನ್ನು ಕಳೆದುಕೊಂಡ ಪತಿ

ಶ್ರೀಕಾಂತ ಸರಗಣಾಚಾರಿ

ಸಂ.ಕ.ಸಮಾಚಾರ ಕುಷ್ಟಗಿ: ಬದುಕಿನ ಬಣ್ಣಗಳನ್ನು ತುಂಬಿಕೊಂಡು, ಹೊಸ ಸಂಸಾರದ ಕನಸುಗಳನ್ನು ಕಟ್ಟಿಕೊಂಡು, ಇನ್ನೇನು ಎರಡು ತಿಂಗಳಲ್ಲಿ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ ಎಂಬ ಸಂತಸದ ನಿರೀಕ್ಷೆಯಲ್ಲಿದ್ದ ದಂಪತಿಯ ಬದುಕಿನಲ್ಲಿ ವಿಧಿ ಕ್ರೂರವಾಗಿ ಆಟವಾಡಿದೆ. ಮಗುವಿನ ಆಗಮನಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಕುಟುಂಬ ಇಂದು ಕಣ್ಣೀರಿನಲ್ಲಿ ಮುಳುಗಿದೆ. ತಾಯಿಯಾಗಿ ಮಗುವನ್ನು ಮಡಿಲಲ್ಲಿ ಎತ್ತಿ ಮುದ್ದಾಡಬೇಕಿದ್ದ ಮಹಿಳೆ, ತನ್ನ ಗರ್ಭದಲ್ಲಿದ್ದ ಕಂದಮ್ಮನೊಂದಿಗೆ ಇಹಲೋಕ ತ್ಯಜಿಸಿರುವ ಘಟನೆ ಹೃದಯವಿದ್ರಾವಕವಾಗಿದೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ವಿರೇಶ್ ಕುಮಾರ್ ಆನೆಹೊಸೂರು ಅವರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದು, ಅವರ ಗರ್ಭದಲ್ಲಿದ್ದ ಏಳು ತಿಂಗಳ ಮಗು ಕೂಡ ಬದುಕುಳಿಯಲಿಲ್ಲ. ಈ ದುರಂತ ಪೊಲೀಸ್ ಇಲಾಖೆಯ ಸಹೋದ್ಯೋಗಿಗಳು, ಕುಟುಂಬಸ್ಥರು ಹಾಗೂ ಬಂಧು ಬಳಗವನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರೇಖಾ: ಕುಲುಗುಂದ ತಾಲ್ಲೂಕಿನ ಇದ್ದಲಿಗಿ ಗ್ರಾಮದ ರೇಖಾ ಅವರಿಗೆ ವರ್ಷದ ಹಿಂದಷ್ಟೇ ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮದ ವೀರೇಶ್ ಕುಮಾರ್ ಅವರೊಂದಿಗೆ ವಿವಾಹವಾಗಿತ್ತು. ವೀರೇಶ್ ಕುಮಾರ್ ಕೂಡ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರೂ ಸಮವಸ್ತ್ರದ ಶಿಸ್ತಿನ ಬದುಕಿನ ನಡುವೆ ಪ್ರೀತಿಯಿಂದ ಸುಂದರ ಸಂಸಾರ ಕಟ್ಟಿಕೊಂಡಿದ್ದರು. ಕರ್ತವ್ಯದ ಒತ್ತಡದ ನಡುವೆಯೂ ಪರಸ್ಪರ ಆಸರೆ, ಪ್ರೀತಿ ಹಾಗೂ ಭವಿಷ್ಯದ ಕನಸುಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಇದೀಗ ಆ ಕುಟುಂಬದ ಸಂತಸಕ್ಕೆ ಕಣ್ಣೀರೇ ಸಂಗಾತಿಯಾಗಿವೆ.

ಮಗುವಿನ ಆಗಮನದ ನಿರೀಕ್ಷೆ: ದಂಪತಿಯ ಬದುಕಿಗೆ ಮತ್ತಷ್ಟು ಸಂತಸ ತಂದಿದ್ದ ರೇಖಾ ಅವರ ಗರ್ಭಧಾರಣೆ ಕುಟುಂಬದಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು, ಇನ್ನೆರಡು ತಿಂಗಳಲ್ಲಿ ಮಗುವನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದರು. ಮಗುವಿಗೆ ಏನೆಲ್ಲ ಮಾಡಬೇಕು, ಅದರ ಭವಿಷ್ಯ ಹೇಗಿರಬೇಕು ಎಂಬ ಕನಸುಗಳನ್ನು ಕುಟುಂಬ ಹೊತ್ತುಕೊಂಡಿತ್ತು. ಆದರೆ, ಆ ಕನಸುಗಳು ನನಸಾಗುವ ಮುನ್ನವೇ ವಿಧಿಯ ಬರಹ ಬದಲಾಗಿದೆ.

ಜ್ವರದಿಂದ ಆರಂಭವಾದ ಅನಾರೋಗ್ಯ ದುರಂತದಲ್ಲಿ ಅಂತ್ಯ:ಇತ್ತೀಚೆಗೆ ರೇಖಾ ಅವರಿಗೆ ಸಾಮಾನ್ಯ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭಿಕ ಹಂತದಲ್ಲಿ ಡೆಂಗ್ಯೂ ಜ್ವರವನ್ನು ಗುರುತಿಸುವಲ್ಲಿ ವಿಳಂಬವಾಯಿತು ಎನ್ನಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರಗೊಂಡ ಬಳಿಕ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ರೇಖಾ ಹಾಗೂ ಅವರ ಗರ್ಭದಲ್ಲಿದ್ದ ಮಗು ಕೊನೆಯುಸಿರೆಳೆದಿವೆ.

ಸಹೋದ್ಯೋಗಿಗಳ ಕಣ್ಣಲ್ಲಿ ಕಣ್ಣೀರು: ಸದಾ ನಗುಮುಖದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಷ್ಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಪತ್ನಿ ಹಾಗೂ ಮಗುವನ್ನು ಕಳೆದುಕೊಂಡ ವೀರೇಶ್ ಕುಮಾರ್ ಅವರ ದುಃಖ ವರ್ಣಿಸಲಾಗದು. ಮಗಳ ಸೀಮಂತ ಮಾಡಿ ಮನೆ ತುಂಬಿಸಿಕೊಳ್ಳಬೇಕಿದ್ದ ತವರು ಮನೆಯವರು ಇಂದು ಭಾರವಾದ ಹೃದಯದಿಂದ ಅಂತಿಮ ವಿದಾಯ ಹೇಳಿದ್ದಾರೆ.

ಇದ್ದಲಿಗಿ ಗ್ರಾಮದಲ್ಲಿ ಕುಟುಂಬಸ್ಥರು, ಬಂಧುಗಳು ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ದುಃಖತಪ್ತ ವಾತಾವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಎರಡು ಜೀವಗಳ ಅಗಲಿಕೆ, ಮೂರು ಕನಸುಗಳ ಅಂತ್ಯ ಹಾಗೂ ಅನೇಕ ಹೃದಯಗಳಲ್ಲಿ ಉಳಿದ ನೋವು ಈ ಘಟನೆಯ ದಾರುಣತೆಯನ್ನು ಸಾರಿದೆ.