ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ದಳಪತಿ ಜೋಸೆಫ್ ವಿಜಯ್ ತಮ್ಮ ವಿಭಿನ್ನ ಹಾಗೂ ದೃಢ ನಿರ್ಧಾರಗಳಿಂದ ದೇಶದ ಗಮನ ಸೆಳೆಯುತ್ತಿದ್ದಾರೆ. ಮೂರು ದಶಕಗಳ ಕಾಲ ಕಾಲಿವುಡ್‌ನ ಸ್ಟಾರ್ ನಟನಾಗಿ ಮಿಂಚಿದ್ದ ವಿಜಯ್, ಈಗ ರಾಜಕಾರಣಿಯಾಗಿಯೂ ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಇತ್ತೀಚೆಗಷ್ಟೇ ಶಾಲೆ, ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳ ಸಮೀಪವಿದ್ದ ಮದ್ಯದಂಗಡಿಗಳನ್ನು ಮುಚ್ಚಿಸುವ ಮೂಲಕ ಮತ್ತು ಮಾದಕವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ವಿಜಯ್ ವ್ಯಾಪಕ ಜನಮೆಚ್ಚುಗೆ ಗಳಿಸಿದ್ದರು.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸರಳತೆಯನ್ನು ಬಿಂಬಿಸುವ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ತಮ್ಮ ಸೀಟಿನಲ್ಲೇ ಕುಳಿತು, ಮನೆಯಿಂದ ತಂದಿರುವ ಲಂಚ್ ಬಾಕ್ಸ್ ಓಪನ್ ಮಾಡುತ್ತಿರುವ ದೃಶ್ಯ ಈ ಫೋಟೋದಲ್ಲಿದೆ. ತಮಿಳುನಾಡಿನ ಅತ್ಯುನ್ನತ ಅಧಿಕಾರದಲ್ಲಿದ್ದರೂ CM ವಿಜಯ್ ಪಾಲಿಸುತ್ತಿರುವ ಈ ಸಾಧಾರಣ ಜೀವನಶೈಲಿ ಎಲ್ಲನ್ನು ಹುಬ್ಬೇರಿಸುವಂತೆ ಮಾಡಿದೆ.
ನಾಲ್ಕು ತಟ್ಟೆಗಳ ಸ್ಟೀಲ್ ಲಂಚ್ ಬಾಕ್ಸ್ ಹೊಂದಿರುವ ಈ ಫೋಟೋವನ್ನು ‘ಸಿಎಂ ಜೋಸೆಫ್ ವಿಜಯ್ ಅಫೀಶಿಯಲ್’ ಎಂಬ ಫ್ಯಾನ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಜಯ್ ಫಿಟ್‌ನೆಸ್ ಕಾಪಾಡಿಕೊಳ್ಳಲು ಸದಾ ಮನೆ ಊಟವನ್ನೇ ಹೆಚ್ಚು ಇಷ್ಟಪಡುತ್ತಾರೆ. ಸಿಎಂ ಆದ ಮೇಲೂ ಈ ಹವ್ಯಾಸ ಬದಲಾಗಿಲ್ಲ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಕಚೇರಿಯ ಹಿನ್ನೆಲೆ ಹಾಗೂ ಅಲ್ಲಿನ ನೈಸರ್ಗಿಕ ಅಂಶಗಳನ್ನು ಗಮನಿಸಿದರೆ ಇದು ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ಚಿತ್ರವಲ್ಲ, ಬದಲಿಗೆ ಅಪ್ಪಟ ನೈಜ ಫೋಟೋ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಫೋಟೋ ನೋಡಿದ ತಮಿಳುನಾಡಿನ ಜನತೆ ಹಾಗೂ ಅಭಿಮಾನಿಗಳು “ನಮ್ಮ ಸಿಎಂ ನಮ್ಮ ಆಸ್ತಿ” ಎಂದು ಹೆಮ್ಮೆಯಿಂದ ಕೊಂಡಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಭಾವುಕರಾಗಿ, “ಅಣ್ಣಾ.. ಒಂದಿನ ಊಟಕ್ಕೆ ನಮ್ಮನೆಗೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನ ನೀಡುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗದಂತೆ ರಾಜಕೀಯದಲ್ಲೂ ವಿಜಯ್ ತಮ್ಮದೇ ಆದ ಹೊಸ ಚಾಪು ಮೂಡಿಸುತ್ತಿದ್ದಾರೆ.























