Home Advertisement
Home ನಮ್ಮ ಜಿಲ್ಲೆ ಬೆಂಗಳೂರು ‘ಭೂ ಗ್ಯಾರಂಟಿ’ : ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ

‘ಭೂ ಗ್ಯಾರಂಟಿ’ : ‘ನನ್ನ ಇ-ಖಾತಾ ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ

0
55

ಬೆಂಗಳೂರು: ನಗರದ ವೇಗವಾದ ಅಭಿವೃದ್ಧಿಗೆ ಅನುಗುಣವಾಗಿ ಆಸ್ತಿ ದಾಖಲೆಗಳನ್ನು ಪಾರದರ್ಶಕ ಮತ್ತು ಡಿಜಿಟಲ್ ರೂಪದಲ್ಲಿ ನಿರ್ವಹಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಹೆಜ್ಜೆ ಇಟ್ಟಿದೆ. ‘ಭೂ ಗ್ಯಾರಂಟಿ’ ಯೋಜನೆಯಡಿ ‘ನನ್ನ ಇ-ಖಾತಾ ನನ್ನ ಹಕ್ಕು’ ಎಂಬ ವಿಶೇಷ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಇದು ಸಾವಿರಾರು ಆಸ್ತಿ ಮಾಲೀಕರಿಗೆ ನೆರವಾಗಲಿದೆ.

ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಈ ಅಭಿಯಾನ ಆರಂಭಗೊಂಡಿದ್ದು, ಆಸ್ತಿ ದಾಖಲೆಗಳ ಡಿಜಿಟಲೀಕರಣ, ಇ-ಖಾತಾ ಸೇವೆಗಳ ಸುಗಮೀಕರಣ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವ ಉದ್ದೇಶ ಹೊಂದಿದೆ. ವಿಶೇಷವಾಗಿ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಮಾಡಿಸಿಕೊಳ್ಳಲು ಬಯಸುವ ನಾಗರಿಕರಿಗೆ ಇದು ದೊಡ್ಡ ಮಟ್ಟದ ಅನುಕೂಲವಾಗಲಿದೆ.

ನಗರದ ಅನೇಕ ನಾಗರಿಕರು ಖಾತಾ ಪರಿವರ್ತನೆ, ಹೊಸ ಇ-ಖಾತಾ, ತಿದ್ದುಪಡಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಈ ತೊಂದರೆ ನಿವಾರಣೆಗಾಗಿ ಜಿಬಿಎ ನಗರಾದ್ಯಂತ 50 ವಿಶೇಷ ಕೇಂದ್ರಗಳನ್ನು ಆರಂಭಿಸಿದೆ. ಪ್ರತಿ ಶನಿವಾರ ಈ ಕೇಂದ್ರಗಳಲ್ಲಿ ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ.

ಪ್ರತಿ ಕೇಂದ್ರದಲ್ಲೂ ದಿನಕ್ಕೆ ಸುಮಾರು 100ರಿಂದ 200 ಜನರಿಗೆ ಸೇವೆ ನೀಡಲಾಗುವುದು. ಒಂದು ವೇಳೆ ಅರ್ಜಿದಾರರ ಸಂಖ್ಯೆ 200 ಮೀರಿದರೆ, ಅವರಿಗೆ ಟೋಕನ್ ನೀಡಿ ಮುಂದಿನ ವಾರ ಆದ್ಯತೆಯ ಮೇರೆಗೆ ಸೇವೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಪ್ರತಿ ಶನಿವಾರ ಸುಮಾರು 5 ಸಾವಿರ ಜನರಿಗೆ ಸೇವೆ ನೀಡುವ ಗುರಿ ಹೊಂದಲಾಗಿದೆ.

ನಾಗರಿಕರ ಅನುಕೂಲಕ್ಕಾಗಿ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ಸರತಿ ಸಾಲಿನ ನಿರ್ವಹಣೆ, ಸಹಾಯವಾಣಿ ಕೇಂದ್ರ, ಸ್ಪಷ್ಟ ನಾಮಫಲಕಗಳು, ಇಂಟರ್ನೆಟ್ ಸಂಪರ್ಕವಿರುವ ಕಂಪ್ಯೂಟರ್‌ಗಳು, ಸ್ಕ್ಯಾನರ್‌ಗಳು ಮತ್ತು ಪ್ರಿಂಟರ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಆಸ್ತಿ ತೆರಿಗೆ ಹಾಗೂ ಇ-ಖಾತಾ ಶುಲ್ಕ ಪಾವತಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ.

ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ತಾಂತ್ರಿಕ ತಂಡ ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿಯನ್ನು ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲಾಗುತ್ತಿದೆ.

ಈ ಅಭಿಯಾನದ ಪ್ರಮುಖ ಆಕರ್ಷಣೆ ಎಂದರೆ ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆಗಾಗಿ ನೀಡಲಾಗಿರುವ ವಿಶೇಷ ರಿಯಾಯಿತಿ. ಈ ಹಿಂದೆ ಮಾರ್ಗಸೂಚಿ ಬೆಲೆಯ ಶೇ.5ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಅದನ್ನು ಶೇ.2ಕ್ಕೆ ಇಳಿಸಲಾಗಿದ್ದು, ಕಡಿಮೆ ವೆಚ್ಚದಲ್ಲಿ ಕಾನೂನುಬದ್ಧ ದಾಖಲೆ ಪಡೆಯಲು ಅವಕಾಶ ದೊರೆತಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ತಮ್ಮ ಇ-ಖಾತಾ ಸಿದ್ಧವಾಗಿರುವ ಬಗ್ಗೆ ಎಸ್‌ಎಂಎಸ್ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಸ್ಥಳದಲ್ಲಿಯೇ ತಾಂತ್ರಿಕ ನೆರವು ಮತ್ತು ತರಬೇತಿಯನ್ನೂ ನೀಡಲಾಗುತ್ತಿದೆ.

ಆಸ್ತಿ ದಾಖಲೆಗಳ ಡಿಜಿಟಲೀಕರಣದಿಂದ ನಕಲಿ ದಾಖಲೆಗಳ ಹಾವಳಿ ಕಡಿಮೆಯಾಗಲಿದೆ. ಮಧ್ಯವರ್ತಿಗಳ ಪ್ರಭಾವ ತಗ್ಗಿ, ಸರ್ಕಾರಿ ಅಧಿಕಾರಿಗಳೇ ನೇರವಾಗಿ ನಾಗರಿಕರಿಗೆ ಸೇವೆ ಒದಗಿಸುವ ವ್ಯವಸ್ಥೆ ಬಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಕಾನೂನು ತೊಡಕುಗಳನ್ನು ತಪ್ಪಿಸಲು ಹಾಗೂ ತಮ್ಮ ಆಸ್ತಿ ದಾಖಲೆಗಳನ್ನು ಅಧಿಕೃತವಾಗಿ ಮಾನ್ಯಗೊಳಿಸಿಕೊಳ್ಳಲು ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಬಿಎ ಅಧಿಕಾರಿಗಳು ಮನವಿ ಮಾಡಿದ್ದಾರೆ.