SK Home Ad
Home ಸಿನಿ ಮಿಲ್ಸ್ ಎ.ಪಿ. ಅರ್ಜುನ್ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್: ಚಿಕ್ಕಣ್ಣನ ನಟನೆ-ಡ್ಯಾನ್ಸ್‌ಗೆ ಶಿವರಾಜ್‌ಕುಮಾರ್ ಫಿದಾ!

ಎ.ಪಿ. ಅರ್ಜುನ್ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್: ಚಿಕ್ಕಣ್ಣನ ನಟನೆ-ಡ್ಯಾನ್ಸ್‌ಗೆ ಶಿವರಾಜ್‌ಕುಮಾರ್ ಫಿದಾ!

0
9

ಬೆಂಗಳೂರು: ‘ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಚಿತ್ರದ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣ ಹಾಗೂ ಆರ್.ಕೆ. ರವಿಕುಮಾರ್ ಸಹ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ಚೊಚ್ಚಲ ನಿರ್ದೇಶನವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನವೆಂಬರ್ 27ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಈ ಸಿನಿಮಾದ ಟ್ರೇಲರ್ ಅನ್ನು ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್‌ಕುಮಾರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್, “ಚಿಕ್ಕಣ್ಣ ಹಿಂದಿನ ಸಿನಿಮಾಗಳಿಗಿಂತಲೂ ಇದರಲ್ಲಿ ತುಂಬಾ ಲೀಲಾಜಾಲವಾಗಿ ನೃತ್ಯ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿದರೆ ಪ್ರಭುದೇವ ನೆನಪಾಗುತ್ತಾರೆ. ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಹಜವಾಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಇನ್ನೆರಡು-ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್ ಸ್ಟಾರ್ ಆಗುತ್ತಾರೆ” ಎಂದು ಭವಿಷ್ಯ ನುಡಿದರು. ಅಲ್ಲದೆ, ತಾಯಿ ಸೆಂಟಿಮೆಂಟ್ ಹಾಡಿನಲ್ಲಿ ದಿಗ್ಗಜ ನಟರ ತಾಯಂದಿರ ಫೋಟೋ ಬಳಸಿರುವುದಕ್ಕೆ ಭಾವುಕರಾದ ಶಿವಣ್ಣ, ನಟಿ ತಾರಾ ಹಾಗೂ ನಾಯಕಿ ವಂದಿತಾ ಅಭಿನಯವನ್ನೂ ಶ್ಲಾಘಿಸಿದರು.

ಶಿವಣ್ಣನ ಮಾತಿಗೆ ಭಾವುಕರಾಗಿ ಪ್ರತಿಕ್ರಿಯಿಸಿದ ಚಿಕ್ಕಣ್ಣ, “ಅಣ್ಣಾವ್ರ ಮಗನ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ತಂದೆ-ತಾಯಿ ಮಾಡಿದ ಪುಣ್ಯ. ಇದು ಕೇವಲ ಕಾಮಿಡಿ ಸಿನಿಮಾವಲ್ಲ, ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಬದುಕಿನ ನೈಜ ಕಥೆ. ನವೆಂಬರ್ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಇಷ್ಟವಾದರೆ ಮಾತ್ರ ಬೆಂಬಲಿಸಿ” ಎಂದರು.
ನಿರ್ಮಾಪಕ ಹಾಗೂ ಕಥೆಗಾರ ಎ.ಪಿ. ಅರ್ಜುನ್ ಮಾತನಾಡಿ, “ಮಂತ್ರಾಲಯದ ರಾಯರ ಆಶೀರ್ವಾದದಿಂದ ಈ ಸಿನಿಮಾ ನಿರ್ಮಾಣವಾಗಿದೆ. ಕ್ಯಾಮೆರಾ ಮುಂದೆ ನಿಲ್ಲುವ ಪ್ರತಿಯೊಬ್ಬರೂ ನನಗೆ ಸ್ಟಾರ್‌ಗಳೇ. ಈ ಸಿನಿಮಾಗೆ ಚಿಕ್ಕಣ್ಣನೇ ದೊಡ್ಡ ಸ್ಟಾರ್. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದೆ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.