SK Home Ad
Home ಸಿನಿ ಮಿಲ್ಸ್ ಕನ್ನಡಿಗರ ಮನಗೆದ್ದು ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಈಗ ಒಟಿಟಿಗೆ ಲಗ್ಗೆ!

ಕನ್ನಡಿಗರ ಮನಗೆದ್ದು ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಈಗ ಒಟಿಟಿಗೆ ಲಗ್ಗೆ!

0
1
ರಂಗಾಯಣ ರಘು ಅಭಿನಯದ ‘ಪ್ರೇಮದ ಊರಲಿ’ ಈಗ ಒಟಿಟಿಯಲ್ಲಿ: ನವೆಂಬರ್ 17ರಿಂದ OTTಯಲ್ಲಿ ಲಭ್ಯ

₹2 ಕೋಟಿ ಬಜೆಟ್‌ನ ‘ಪ್ರೇಮದ ಊರಲಿ’ಗೆ ₹139 ಕೋಟಿ ಗಳಿಕೆ: ಚಿತ್ರಮಂದಿರದ ಬಳಿಕ ಈಗ ಒಟಿಟಿಗೂ ಎಂಟ್ರಿ!

ಬೆಂಗಳೂರು : ದೊಡ್ಡ ತಾರಾಬಳಗ, ಭರ್ಜರಿ ಪ್ರಚಾರವಿಲ್ಲದಿದ್ದರೂ ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದಲೇ ಯಶಸ್ಸಿನ ಹಾದಿ ಹಿಡಿದ ಕನ್ನಡದ ‘ಪ್ರೇಮದ ಊರಲಿ’ ಸಿನಿಮಾ ಇದೀಗ ಮತ್ತೊಂದು ಮೈಲಿಗಲ್ಲು ತಲುಪಿದೆ. ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, 50 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು ಅಂದಾಜು ₹139 ಕೋಟಿ ಜಾಗತಿಕ ಗಳಿಕೆ ದಾಖಲಿಸಿದೆ. ಇಂದಿನಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಜಿಟಲ್ ಪ್ರದರ್ಶನ ಆರಂಭಿಸಿರುವುದು ಚಿತ್ರದ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.

ಮನೋಜ್ ಕುಮಾರ್ ಕಥೆ ಬರೆದು ನಿರ್ದೇಶಿಸಿರುವ ಈ ಪ್ರೇಮಕೌಟುಂಬಿಕ ಚಿತ್ರದಲ್ಲಿ ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಅವರು ನಾಗಣ್ಣ ಎಂಬ ವಿಧವೆ ರೈತನ ಪಾತ್ರ ನಿರ್ವಹಿಸಿದ್ದು, ಮಗ ಸಂತೋಷ್‌ (ಶ್ರೀರಾಮ್)ಗೆ ವಿದ್ಯಾವಂತ ವಧುವನ್ನು ಹುಡುಕುವ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಬದುಕು, ತಂದೆ-ಮಗನ ಸಂಬಂಧ, ಪ್ರೀತಿ, ಕುಟುಂಬದ ಮೌಲ್ಯಗಳು ಮತ್ತು ಭಾವನಾತ್ಮಕ ಸಂಘರ್ಷಗಳು ಕಥೆಯ ಪ್ರಮುಖ ಅಂಶಗಳಾಗಿವೆ.

ಚಿತ್ರದ ಆರಂಭಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಬಿಡುಗಡೆಯ ಮೊದಲ ದಿನ ಕೇವಲ 60 ಪ್ರದರ್ಶನಗಳೊಂದಿಗೆ ಆರಂಭವಾಗಿದ್ದ ಸಿನಿಮಾ, ಪ್ರೇಕ್ಷಕರಿಂದ ವ್ಯಕ್ತವಾದ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಬಾಯಿಮಾತಿನ ಪ್ರಚಾರದಿಂದ ಕ್ರಮೇಣ ಹೆಚ್ಚಿನ ಚಿತ್ರಮಂದಿರಗಳನ್ನು ಪಡೆದುಕೊಂಡಿತು. ಅಕ್ಟೋಬರ್ ಮಧ್ಯಭಾಗದಲ್ಲಿ ₹50 ಕೋಟಿ ಗಡಿ ದಾಟಿದ ವರದಿಗಳು ಹೊರಬಂದಿದ್ದವು. ನಂತರದ ವಾರಗಳಲ್ಲಿ ಗಳಿಕೆ ಮತ್ತಷ್ಟು ಏರಿಕೆಯಾಯಿತು.

₹139 ಕೋಟಿ – ಬಜೆಟ್‌ಗಿಂತ ಹಲವು ಪಟ್ಟು ಹೆಚ್ಚು : ಚಿತ್ರದ ನಿರ್ಮಾಣ ವೆಚ್ಚ ಸುಮಾರು ₹2 ಕೋಟಿ ಎಂದು ವರದಿಯಾಗಿದೆ. ಸ್ಯಾಕ್ನಿಲ್ಕ್ ಬಾಕ್ಸ್ ಆಫೀಸ್ ಅಂದಾಜಿನ ಪ್ರಕಾರ, ನವೆಂಬರ್ 16ರವರೆಗಿನ 53 ದಿನಗಳಲ್ಲಿ ಭಾರತದಲ್ಲಿ ₹116.18 ಕೋಟಿ ನಿವ್ವಳ ಗಳಿಕೆ, ₹135.67 ಕೋಟಿ ಒಟ್ಟು ಗಳಿಕೆ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹3.65 ಕೋಟಿ ಗಳಿಸಿದೆ. ಇದರೊಂದಿಗೆ ವಿಶ್ವಾದ್ಯಂತದ ಒಟ್ಟು ಗಳಿಕೆ ₹139.32 ಕೋಟಿಯಾಗಿದೆ. ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ ಅಂದಾಜಿಸಿದೆ.

ಚಿತ್ರದ ಯಶಸ್ಸಿಗೆ ಸರಳವಾದ ಕಥೆ, ಗ್ರಾಮೀಣ ಪರಿಸರದ ಚಿತ್ರಣ, ಕಲಾವಿದರ ಅಭಿನಯ ಮತ್ತು ಕುಟುಂಬ ಸಂಬಂಧಗಳ ಭಾವನಾತ್ಮಕ ನಿರೂಪಣೆ ಕಾರಣವೆಂದು ಪ್ರೇಕ್ಷಕರ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗಿದೆ. ಆರಂಭದಲ್ಲಿ ಸೀಮಿತ ಪ್ರದರ್ಶನ ಪಡೆದಿದ್ದ ಚಿತ್ರವು ನಂತರ ದೊಡ್ಡ ಮಟ್ಟದ ಪ್ರೇಕ್ಷಕ ಬಳಗವನ್ನು ಸೆಳೆದಿರುವುದು ಕನ್ನಡ ಚಿತ್ರರಂಗದಲ್ಲಿಯೂ ಚರ್ಚೆಗೆ ಕಾರಣವಾಗಿದೆ.