BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ‘ಮಹಾರಾಣಿ’ ಪಟ್ಟಕ್ಕಾಗಿ ನಡೆಯುತ್ತಿರುವ ‘ಯುವರಾಣಿ’ ಟಾಸ್ಕ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಗಾನವಿ ಗೌಡ, ಸೌಂದರ್ಯ ಶೆಟ್ಟಿ ಹಾಗೂ ಆಸಿಯಾ ಫಿರ್ದೋಸ್ ನಡುವೆ ನಡೆಯುತ್ತಿರುವ ಈ ಪೈಪೋಟಿಯಲ್ಲಿ, ಗಾನವಿ ಗೌಡ ತಮಗೆ ಅಂಗರಕ್ಷಕರಿಂದ ಸರಿಯಾದ ಸಾಥ್ ಸಿಗುತ್ತಿಲ್ಲ ಎಂಬ ಅಸಮಾಧಾನದ ನಡುವೆಯೇ ಜಗದೀಶ್ ಮೇಲೆ ಕೈ ಮಾಡಲು ಮುಂದಾಗಿದ್ದು ಮನೆಯಲ್ಲಿ ಆತಂಕ ಸೃಷ್ಟಿಸಿದೆ.
ಟಾಸ್ಕ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದ ಗಾನವಿ ಗೌಡ ತಮಗೆ ಅಂಗರಕ್ಷಕರಾಗಿ ಮಂಜ, ಗಗನ್ ಚಿನ್ನಪ್ಪ ಹಾಗೂ ಧನುಷ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಸೌಂದರ್ಯ ಶೆಟ್ಟಿ ತಂಡದಲ್ಲಿ ತಾಂಡವ್ ರಾಮ್, ಜಗದೀಶ್ ಹಾಗೂ ಯಶಸ್ ಇದ್ದರೆ, ಆಸಿಯಾ ತಂಡಕ್ಕೆ ಕಿರಣ್ ಶಾಸ್ತ್ರಿ ಮತ್ತು ಪ್ರಶಾಂತ್ ಉಳಿದುಕೊಂಡಿದ್ದರು. ಮೊದಲ ಸುತ್ತಿನಲ್ಲಿ ಆಸಿಯಾ ತಂಡ ಗೆಲುವು ಸಾಧಿಸಿ ಸೌಂದರ್ಯ ಶೆಟ್ಟಿ ತಂಡವನ್ನು ಹೊರಹಾಕಿತ್ತು.
ಇದೀಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಯುವರಾಣಿಯರ ಮನಸ್ಸು ಓಲೈಸುವ ಟಾಸ್ಕ್ ನೀಡಲಾಗಿದೆ. ಈ ವೇಳೆ ಅಡುಗೆ ಮನೆಗೆ ತೆರಳುತ್ತಿದ್ದ ಜಗದೀಶ್ ಅವರನ್ನು ಉದ್ದೇಶಿಸಿ ಗಾನವಿ, “ನಾಟಕಕ್ಕೆ ಇನ್ನೊಂದು ಹೆಸರೇ ಜಗ್ಗಿ, ಕೈಲಾಗದವರು ನೆಲ ಡೊಂಕು ಅಂತಾರೆ” ಎಂದು ವ್ಯಂಗ್ಯವಾಡಿದ್ದಾರೆ. ಇದರಿಂದ ಕೆರಳಿದ ಜಗದೀಶ್, “ಬಾಯಿ ಮುಚ್ಚಿಕೊಂಡು ಹೋಗು, ನಿನ್ನ ಬಾಯಿ ಬಚ್ಚಲು, ಮಾನ ಮರ್ಯಾದೆ ಇಲ್ಲದವಳು” ಎಂದು ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಈ ಮಾತಿಂದ ತೀವ್ರ ಕೋಪಗೊಂಡ ಗಾನವಿ ಗೌಡ, ಜಗದೀಶ್ ಮೇಲೆ ಕೈ ಮಾಡಲು ಮುಂದಾಗಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಮಂಜ ಹಾಗೂ ಜಗದೀಶ್ ನಡುವೆ ಪರಸ್ಪರ ಅವಾಚ್ಯ ಪದಗಳ ಬಳಕೆಯೊಂದಿಗೆ ತೀವ್ರ ವಾಗ್ವಾದ ನಡೆದಿದೆ.






















