ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ 1,100ಕ್ಕೂ ಹೆಚ್ಚು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ವೀಕ್ಷಕರಿಗೆ ಭಾವುಕ ವಿದಾಯ ಹೇಳಿದೆ. ಇದೇ ಸಮಯದಲ್ಲಿ ವೀಕ್ಷರನ್ನು ರಂಜಿಸಲು ನಿಮ್ಮ ಮನೆಗಳಿಗೆ ಇನ್ನೂಮುಂದೆ ಅನು ಪ್ರಭಾಕಾರ್ ಮತ್ತು ರಿತ್ವಿಕ್ ಕೃಪಾಕರ್ ಅಭಿನಯದ ಹೊಸ ಧಾರಾವಾಹಿ ‘ಗೌರಿಪುತ್ರ’ ಪ್ರಸಾರವಾಗುತ್ತಿದೆ. ಈ ಸುಂದರ ಪಯಣಕ್ಕೆ ತೆರೆ ಬಿದ್ದ ಬೆನ್ನಲ್ಲೇ, ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಗೌತಮ್ ದಿವಾನ್ ಖ್ಯಾತಿಯ ರಾಜೇಶ್ ನಟರಂಗ ಹಾಗೂ ಭೂಮಿಕಾ ಪಾತ್ರಧಾರಿ ಛಾಯಾ ಸಿಂಗ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ನಟಿ ಛಾಯಾ ಸಿಂಗ್, “ಅಮೃತಧಾರೆ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ಪ್ರಾಜೆಕ್ಟ್. ರಾಜೇಶ್ ಸರ್, ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ಅಭಿಮಾನಿಗಳು ಹಾಗೂ ವೀಕ್ಷಕರ ಪ್ರೀತಿಯಿಲ್ಲದಿದ್ದರೆ ನಾನು ಭೂಮಿಕಾ ಆಗಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಹಾರೈಕೆ ಹೀಗೆಯೇ ಮುಂದುವರಿಯಲಿ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇತ್ತ ರಾಜೇಶ್ ನಟರಂಗ ಮಾತನಾಡಿ, “ಪ್ರತಿಯೊಂದಕ್ಕೂ ಒಂದು ಅಂತ್ಯವಿರುತ್ತದೆ, ಹಾಗೆಯೇ ಅಮೃತಧಾರೆಗೂ ತೆರೆ ಬಿದ್ದಿದೆ. ಕಳೆದ ಮೂರೂವರೆ ವರ್ಷಗಳಿಂದ ನನ್ನನ್ನು ಗೌತಮ್ ದಿವಾನ್ ಆಗಿ ಬದುಕಿಸಿದ ಈ ಪಾತ್ರಕ್ಕೆ, ಸಹಕಲಾವಿದರಿಗೆ ಹಾಗೂ ತೆರೆಯ ಹಿಂದೆ ದುಡಿದ ತಂಡಕ್ಕೆ ಧನ್ಯವಾದಗಳು. ರೀಲ್ಸ್ಗಳ ಈ ಕಾಲಘಟ್ಟದಲ್ಲಿ 20 ಲಕ್ಷಕ್ಕೂ ಹೆಚ್ಚು ಸೆಕೆಂಡ್ಗಳ ಕಾಲ ನಮ್ಮೊಂದಿಗೆ ಕಳೆದ ವೀಕ್ಷಕರೇ ನಮಗೆ ನಿಜವಾದ ಗುರುಗಳು. ಭಾಷೆಯ ಗಡಿ ದಾಟಿ ಮರಾಠಿ, ತಮಿಳು ಹಾಗೂ ವಿದೇಶಿ ಪ್ರೇಕ್ಷಕರೂ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದು ನನಗೆ ಅತೀವ ಸಂತಸ ತಂದಿದೆ” ಎಂದು ಭಾವುಕರಾಗಿ ನುಡಿದಿದ್ದಾರೆ.






















