SK Home Ad
Home ಸಿನಿ ಮಿಲ್ಸ್ ಸಿನಿ ವಿಮರ್ಶೆ: ಸರಳ ಪ್ರೇಮಕಥೆಗೆ ಹೊಸ ಸ್ಪರ್ಶ ನೀಡಿದ ಸುನಿ

ಸಿನಿ ವಿಮರ್ಶೆ: ಸರಳ ಪ್ರೇಮಕಥೆಗೆ ಹೊಸ ಸ್ಪರ್ಶ ನೀಡಿದ ಸುನಿ

0
56

ಮೋಡ ಕವಿದ ಸರಳ ಪ್ರೇಮಕಥೆಗೆ ಹೊಸ ಸ್ಪರ್ಶ ನೀಡಿದ ಸುನಿ : ಸುನಿ ನಿರ್ದೇಶನದ ಮತ್ತೊಂದು ಅಪರೂಪದ ಪ್ರೇಮಕಥೆ ‘ಮೋಡ ಕವಿದ ವಾತಾವರಣ’

ಚಿತ್ರ: ಮೋಡ ಕವಿದ ವಾತಾವರಣ
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಶ್ರೀ ರಾಮ್ ಮೂವೀಸ್
ತಾರಾಗಣ: ಶೀಲಂ ಎಂ ಸ್ವಾಮಿ, ಸಾತ್ವಿಕಾ, ಮೋಕ್ಷ ಕುಶಾಲ್ ಇತರರು.

– ಗಣೇಶ್ ರಾಣೆಬೆನ್ನೂರು

ಬೆಂಗಳೂರು: ಸರಳ ಪ್ರೇಮಕಥೆಗಳನ್ನು ವಿಶಿಷ್ಟವಾಗಿ ಮತ್ತು ಸಂಕೀರ್ಣ ಪ್ರೇಮಕಥೆಗಳನ್ನು ಸರಳವಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕ ಸುನಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರ ‘ಮೋಡ ಕವಿದ ವಾತಾವರಣ’ ಕೂಡ ಇದೇ ಶೈಲಿಯನ್ನು ಮುಂದುವರಿಸುತ್ತಾ ಪ್ರೇಕ್ಷಕರ ಮುಂದೆ ಬಂದಿದೆ.

ಚಿತ್ರದ ಆರಂಭದಲ್ಲಿ ಇದು ಮತ್ತೊಂದು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎನ್ನುವ ಭಾವನೆ ಮೂಡಿಸುವುದು ಸಹಜ. ಮೊದಲಾರ್ಧದ ಪೂರ್ತಿ ಹಾಸ್ಯ, ಪ್ರೀತಿ ಮತ್ತು ಲವಲವಿಕೆಯ ಮೂಲಕ ಕಥೆಯನ್ನು ಸುಲಭವಾಗಿ ಸಾಗಿಸುವ ನಿರ್ದೇಶಕರು, ದ್ವಿತೀಯಾರ್ಧದಲ್ಲಿ ಕಥೆಗೆ ಹೊಸ ತಿರುವು ನೀಡುತ್ತಾರೆ. ಮೊದಲಾರ್ಧದಲ್ಲಿ ಮೂಡಿದ ಗೊಂದಲಗಳಿಗೆ ಉತ್ತರ ನೀಡುತ್ತಾ ಸಾಗುವ ಕಥೆ, ಪ್ರೇಕ್ಷಕರನ್ನು ಮತ್ತೊಂದು ಭಾವನಾತ್ಮಕ ಮಜಲಿನತ್ತ ಕರೆದೊಯ್ಯುತ್ತದೆ.

ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

ಚಿತ್ರವನ್ನು ವೀಕ್ಷಿಸುವಾಗ ಮಳೆಗಾಲದಲ್ಲಿ ಮಲೆನಾಡಿಗೆ ಭೇಟಿ ನೀಡಿ, ಅಲ್ಲಿ ಎರಡು ವಿಭಿನ್ನ ಪ್ರೇಮಕಥೆಗಳನ್ನು ಕೇಳಿದ ಅನುಭವವಾಗುತ್ತದೆ. ಮನರಂಜನೆಗೆ ಹೆಚ್ಚಿನ ಒತ್ತು ನೀಡಿರುವ ನಿರ್ದೇಶಕರು, ಜೊತೆಗೆ ಭಾವನಾತ್ಮಕ ಅಂಶಗಳು ಮತ್ತು ಗೊಂದಲದ ಸನ್ನಿವೇಶಗಳನ್ನು ಸಮತೋಲನದಿಂದ ನಿರೂಪಿಸಿದ್ದಾರೆ.

ಸುನಿ ಅವರ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ತಾಜಾತನ, ಸರಳ ಕಥನ ಶೈಲಿ ಹಾಗೂ ನೈಜ ಸಂಭಾಷಣೆಗಳು ಗಮನ ಸೆಳೆಯುತ್ತವೆ. ಆದರೆ ಚಿತ್ರದ ದ್ವಿತೀಯಾರ್ಧದಲ್ಲಿ ಕಥೆಯನ್ನು ಇನ್ನಷ್ಟು ಸರಳವಾಗಿ ಮುಕ್ತಾಯಗೊಳಿಸುವ ಅವಕಾಶವಿದ್ದರೂ, ಸ್ವಲ್ಪ ಸಂಕೀರ್ಣವಾಗಿ ಮುಗಿಸಿರುವುದು ಕೆಲವು ಪ್ರೇಕ್ಷಕರಿಗೆ ತ್ರಾಸದಾಯಕವಾಗಿ ಅನಿಸಬಹುದು. ಜೊತೆಗೆ, ಕಥೆಯ ಭಾವನಾತ್ಮಕತೆಯನ್ನು ಮತ್ತಷ್ಟು ಗಾಢಗೊಳಿಸಲು ಒಂದೆರಡು ಹಾಡುಗಳ ಅವಕಾಶವಿದ್ದರೂ, ಅದನ್ನು ಬಳಸಿಕೊಳ್ಳಲಾಗಿಲ್ಲ ಎನ್ನುವ ಭಾವನೆ ಮೂಡುತ್ತದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಮಂತ್ರಾಲಯ ಯಾತ್ರೆ ಹೊರಟಿದ್ದ ನಾಲ್ವರು ಸಾವು!

ನಾಯಕನಾಗಿ ಮೊದಲ ಚಿತ್ರದಲ್ಲೇ ಶೀಲಂ ಎಂ. ಸ್ವಾಮಿ ಭರವಸೆ ಮೂಡಿಸಿದ್ದು, ಸಾತ್ವಿಕಾ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮನಸೆಳೆಯುತ್ತಾರೆ. ಮೋಕ್ಷಾ ಕುಶಾಲ್ ಅವರ ಅಭಿನಯವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಒಟ್ಟಾರೆ, ‘ಮೋಡ ಕವಿದ ವಾತಾವರಣ’ ಸಿನಿಮಾ ಪ್ರೀತಿ, ಭಾವನೆ ಮತ್ತು ಮಲೆನಾಡಿನ ಸೊಬಗನ್ನು ಇಷ್ಟಪಡುವ ಪ್ರೇಕ್ಷಕರಿಗೆ ಒಮ್ಮೆ ನೋಡಬಹುದಾದ ಚಿತ್ರವಾಗಿದೆ.