SK Home Ad
Home ಸಿನಿ ಮಿಲ್ಸ್ ಆಯುಷ್ ಸಿನಿಮಾ ನಿರ್ದೇಶಕರ ಗೇಟ್ ಪಾಸ್ ವಿವಾದ: ಕೊನೆಗೂ ಮೌನ ಮುರಿದ ಪ್ರಿಯಾಂಕಾ ಉಪೇಂದ್ರ!

ಆಯುಷ್ ಸಿನಿಮಾ ನಿರ್ದೇಶಕರ ಗೇಟ್ ಪಾಸ್ ವಿವಾದ: ಕೊನೆಗೂ ಮೌನ ಮುರಿದ ಪ್ರಿಯಾಂಕಾ ಉಪೇಂದ್ರ!

0
7

ಬೆಂಗಳೂರು: ಕನ್ನಡ ಚಿತ್ರರಂಗದ ತಾರಾ ದಂಪತಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಅವರ ಚೊಚ್ಚಲ ಚಿತ್ರ ‘ಆಯುಷ್’ನ ನಿರ್ದೇಶಕರ ಬದಲಾವಣೆ ವಿಚಾರ ಸದ್ಯ ಚಂದನವನದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಚಿತ್ರದ ನಿರ್ದೇಶಕ ‘ಮೊದಲ ಸಲ’ ಪುರುಷೋತ್ತಮ್ ಅವರನ್ನು ಹಠಾತ್ ಆಗಿ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಫಿಲ್ಮ್ ಚೇಂಬರ್‌ಗೆ ಪತ್ರ ಬರೆಯುವ ಮೂಲಕ ಮೌನ ಮುರಿದಿದ್ದಾರೆ.

ಮಗನ ಚೊಚ್ಚಲ ಸಿನಿಮಾದ ಭವಿಷ್ಯ, ನಿರ್ಮಾಪಕರ ಹೂಡಿಕೆ ಹಾಗೂ ಚಿತ್ರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ನಿರ್ದೇಶಕರನ್ನು ಬದಲಾಯಿಸುವ ಕಠಿಣ ತೀರ್ಮಾನ ಅನಿವಾರ್ಯವಾಯಿತು ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ. ಕೆಲಸದ ವೇಳಾಪಟ್ಟಿ, ಸಮರ್ಪಕ ಸಂವಹನ ಹಾಗೂ ಯೋಜನೆಯ ಕಾರ್ಯಗತಗೊಳಿಸುವಿಕೆಯಲ್ಲಿ ಗಂಭೀರ ಮಟ್ಟದ ಸಮಸ್ಯೆಗಳು ಎದುರಾಗಿದ್ದವು ಎಂದು ನಿರ್ಮಾಣ ಸಂಸ್ಥೆಯ ಅಧಿಕೃತ ಪತ್ರವನ್ನು ಹಂಚಿಕೊಂಡು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, 12 ವರ್ಷಗಳ ಕನಸಿನ ಕಥೆಯನ್ನು ನಂಬಿ ಒಂದೂವರೆ ವರ್ಷ ದುಡಿದ ತಮಗೆ ಅನ್ಯಾಯವಾಗಿದೆ ಎಂದು ನಿರ್ದೇಶಕ ಪುರುಷೋತ್ತಮ್ ಅಳಲು ತೋಡಿಕೊಂಡಿದ್ದಾರೆ. 50% ಚಿತ್ರೀಕರಣ ಮುಗಿದ ಬಳಿಕ ತಮ್ಮನ್ನು ಕೈಬಿಡಲಾಗಿದ್ದು, ತಾವು ಚಿತ್ರೀಕರಿಸಿದ ದೃಶ್ಯಗಳನ್ನು ಬಳಸಬಾರದು ಮತ್ತು ಶ್ರಮಕ್ಕೆ ತಕ್ಕ ಸಂಭಾವನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಛಾಯಾಗ್ರಾಹಕ ವೇಣು ಅವರನ್ನು ಕೂಡ ಚಿತ್ರತಂಡದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಈ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಮೆಟ್ಟಿಲೇರಿದೆ. ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಕಂಡುಕೊಳ್ಳಲು ಚೇಂಬರ್ ಹಸ್ತಕ್ಷೇಪ ಕೋರಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಹೇಗೆ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.